ಈ ಬಾರಿಯ ಆಯುಧ ಪೂಜೆ ಹಾಗೂ ವಿಜಯದಶಮಿ ಮಂಗಳವಾರ ಮತ್ತು ಬುಧವಾರದಂದು ಆಚರಿಸಲಾಗುತ್ತಿದ್ದು, ಸೋಮವಾರ ಒಂದು ದಿನ ರಜೆ ಮಾಡಿದರೆ ದೀರ್ಘ ರಜೆ ಸಿಕ್ಕಂತಾಗುತ್ತದೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದರಾಗುತ್ತಿದ್ದಾರೆ.
ಅದರಲ್ಲೂ ಐಟಿ ಕಂಪೆನಿಗಳಿಗೆ ಶನಿವಾರವೂ ರಜೆ ಇರುವ ಕಾರಣ ಶುಕ್ರವಾರ ಸಂಜೆಯಿಂದಲೇ ಎಲ್ಲರೂ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಸ್ಸುಗಳಲ್ಲಿ ಸೀಟು ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಇದ್ದು, ಇದರ ಮಧ್ಯೆ ಖಾಸಗಿ ಬಸ್ ಪ್ರಯಾಣದರ ಮುಗಿಲು ಮುಟ್ಟಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಬೆಂಗಳೂರಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ಪ್ರಯಾಣದರ 700 ರಿಂದ 750 ರೂಪಾಯಿಗಳಿದ್ದರೆ ಹಬ್ಬದ ಸಂದರ್ಭದಲ್ಲಿ ಇದು 1600 ರಿಂದ 1800 ರೂಪಾಯಿಗಳಾಗಿದೆ. ಅದೇ ರೀತಿ ಬೆಂಗಳೂರಿನಿಂದ ಎಲ್ಲ ಪ್ರಮುಖ ನಗರಗಳ ಪ್ರಯಾಣದರ ಬಹುತೇಕ ದುಪ್ಪಟ್ಟಾಗಿದೆ. ಸಾರಿಗೆ ಇಲಾಖೆಯ ಎಚ್ಚರಿಕೆ ಹೊರತಾಗಿಯೂ ಕೆಲ ಖಾಸಗಿ ಬಸ್ ನವರು ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದಾರೆ.