ಶ್ರೀನಗರ: ರಸ್ತೆ ಕೆಟ್ಟಿದ್ದರೆ ಅಥವಾ ಬೇರೇನಾದ್ರೂ ಸಮಸ್ಯೆ ಆಗಿದ್ದರೆ, ಸ್ಥಳದಲ್ಲಿ ಏನು ನಡೆಯುತ್ತಿದೆ ಅಥವಾ ಅಲ್ಲೇನಿದೆ ಎನ್ನುವುದನ್ನು ಸುದ್ದಿವಾಹಿನಿ ವರದಿಗಾರರು ನಿರೂಪಿಸಿರುವುದನ್ನು ನೀವು ನೋಡಿರ್ತೀರಾ…..ಸಾಮಾಜಿಕ ಮಾಧ್ಯಮಗಳು ಕಾಲಿಟ್ಟ ಮೇಲಂತೂ ವೃತ್ತಿಪರ ಪತ್ರಕರ್ತರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ದುರವಸ್ಥೆಯ ಬಗ್ಗೆ ವಿಡಿಯೋ ಮಾಡಿ ತಮ್ಮದೇ ಆದ ಸುದ್ದಿ ತಯಾರಿಸಿ ಬಿತ್ತರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ.
ಇದೀಗ ಪುಟ್ಟ ಬಾಲಕಿಯೊಬ್ಬಳು ಮಾಡಿರುವ ವರದಿಗಾರಿಕೆ ಎಲ್ಲರ ಗಮನ ಸೆಳೆದಿದೆ. ಹೌದು, ತೆರೆದ ಮ್ಯಾನ್ಹೋಲ್ಗಳು ಮತ್ತು ರಸ್ತೆ ಗುಂಡಿಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಅತ್ಯಂತ ದೊಡ್ಡ ಸಮಸ್ಯೆಗಳಲ್ಲೊಂದಾಗಿದೆ. ತನ್ನ ನಗರದ ರಸ್ತೆಗಳ ದುರವಸ್ಥೆಯನ್ನು ತೋರಿಸಲು ಕಾಶ್ಮೀರದ ಈ ಪುಟ್ಟ ಬಾಲಕಿ ವಿಡಿಯೋ ಮೂಲಕ ವಾಕ್ ಥ್ರೂ (ವರದಿ) ಮಾಡಿದ್ದಾಳೆ.
ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಪುಟ್ಟ ಪತ್ರಕರ್ತೆಯು ಮಳೆಯು ನಗರದ ರಸ್ತೆಗಳನ್ನು ಹೇಗೆ ಹದಗೆಡಿಸಿದೆ ಎಂಬುದನ್ನು ವಿವರಿಸಿದ್ದಾಳೆ. ವೃತ್ತಿಪರ ವರದಿಗಾರರಿಗಿಂತಲೂ ತಾನೇನು ಕಮ್ಮಿಯಿಲ್ಲ ಎಂಬಂತೆ, ಮಣ್ಣಿನ ರಸ್ತೆಯ ಮಧ್ಯದಲ್ಲಿ ನಿಂತು ಸಣ್ಣ ಲ್ಯಾಪಲ್ ಮೈಕ್ ಅನ್ನು ಹಿಡಿದು ವರದಿ ಮಾಡಿದ್ದಾಳೆ.
ಹದಗೆಟ್ಟ ರಸ್ತೆಯುದ್ದಕ್ಕೂ ನಡೆದ ಪುಟಾಣಿ ವರದಿಗಾರ್ತಿ, ಹದಗೆಟ್ಟ ರಸ್ತೆಗಳನ್ನು ವಿಡಿಯೋ ಮೂಲಕ ತೋರಿಸಿದ್ದಾಳೆ. ಅಲ್ಲದೆ ಜನರು ಹೇಗೆ ರಸ್ತೆಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ ಎಂಬುದನ್ನು ಕೂಡ ಆಕೆ ವಿವರಿಸಿದ್ದಾಳೆ. ರಸ್ತೆ ತುಂಬಾ ಕೊಳಕಾಗಿದ್ದು, ನಮ್ಮ ಅತಿಥಿಗಳು ಇಲ್ಲಿಗೆ ಬರಲು ಬಯಸುವುದಿಲ್ಲ ಎಂದು ಹೇಳಿದ್ದಾಳೆ.
ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ 1.83 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.