ದುರಂತ ಘಟನೆಯೊಂದರಲ್ಲಿ ಹದಗೆಟ್ಟ ರಸ್ತೆಯಲ್ಲಿ ಆಂಬುಲೆನ್ಸ್ ಕೆಟ್ಟು ನಿಂತಿದ್ದರಿಂದ ಮಗುವಿನ ಶವವನ್ನ ತಾಯಿ ತನ್ನ ತೋಳಲ್ಲಿ ಹಿಡಿದುಕೊಂಡು ಹೋಗಿರುವ ಪ್ರಕರಣ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಗ್ರಾಮದಲ್ಲಿ ನಡೆದಿದೆ.
18 ತಿಂಗಳ ಹೆಣ್ಣು ಮಗು ತನ್ನ ಪೋಷಕರೊಂದಿಗೆ ನಿವಾಸದ ಹೊರಗೆ ಮಲಗಿದ್ದಾಗ ಹಾವು ಕಚ್ಚಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ನಂತರ ಪೋಷಕರು ಮಗುವನ್ನು ಆನೈಕಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿಯಿತು. ಹೀಗಾಗಿ ಮಗುವಿನ ದೇಹದ ತುಂಬಾ ಹಾವಿನ ವಿಷ ಹರಡಿ ದಾರಿ ಮಧ್ಯೆಯೇ ಮಗು ಸಾವನ್ನಪ್ಪಿತ್ತು. ಆನೈಕಟ್ಟು ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡರು. ನಂತರ ಮಗುವಿನ ಶವವನ್ನು ಅಂತ್ಯಕ್ರಿಯೆಗಾಗಿ ಪೋಷಕರಿಗೆ ಹಸ್ತಾಂತರಿಸಲಾಯಿತು.
ಶವವನ್ನು ಅವರು ಆಂಬುಲೆನ್ಸ್ ನಲ್ಲಿ ಗ್ರಾಮದತ್ತ ಕೊಂಡೊಯ್ಯುತ್ತಿದ್ದರು. ಆದರೆ ವೆಲ್ಲೂರಿನಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ ಮಗುವಿನ ಶವ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್ ಕೆಟ್ಟು ನಿಂತಿತು. ಆಗ ಮೃತ ಮಗುವಿನ ತಾಯಿ ಪ್ರಿಯಾ ಶವವನ್ನು ಕೆಸರುಮಯವಾದ ರಸ್ತೆಯಲ್ಲಿ ತೋಳಲ್ಲಿ ಹಿಡಿದುಕೊಂಡು ಗ್ರಾಮಕ್ಕೆ ಹೋಗಬೇಕಾಯಿತು.