‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಒಂದು ಕಾಲದಲ್ಲಿ ಅವರ ಆಪ್ತ ವಲಯದಲ್ಲಿದ್ದ ಇಬ್ಬರು ಮಂಗಳವಾರದಂದು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೆವಾಡ ಎಂಬವರನ್ನು ಬಂಧಿಸಿದ್ದಾರೆ.
ಪ್ರತಿ ಮಂಗಳವಾರದಂದು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಚಂದ್ರಶೇಖರ ಗುರೂಜಿ ವಾಸ್ತು ಕುರಿತು ಸಲಹೆ ಸೂಚನೆ ನೀಡುತ್ತಿದ್ದು, ಹೀಗಾಗಿ ಜುಲೈ 2 ರಂದು ಪತ್ನಿ ಅಂಕಿತಾರೊಂದಿಗೆ ಹುಬ್ಬಳ್ಳಿಗೆ ಬಂದಿದ್ದ ಅವರು ಎರಡನೇ ಮಹಡಿಯ 220ನೇ ನಂಬರ್ ರೂಮ್ನಲ್ಲಿ ತಂಗಿದ್ದರು. ಈ ಮಾಹಿತಿಯನ್ನು ತಿಳಿದಿದ್ದ ಹಂತಕರು ಮಾತುಕತೆ ನೆಪದಲ್ಲಿ ಆಗಮಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾರ ತಂದೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದು, ಗುರೂಜಿ ಅವರು ಹತ್ಯೆಯಾಗುವ ಕೆಲ ನಿಮಿಷದ ಮುನ್ನ ತಮ್ಮ ಮಾವ ರಮೇಶ್ ಅವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಲಾಗಿದೆ.
ನಾವು ನಾಳೆ ಮುಂಬೈಗೆ ಮರಳುತ್ತೇವೆ ಎಂದು ತಮ್ಮ ಮಾವನವರಿಗೆ ಹೇಳಿದ್ದ ಚಂದ್ರಶೇಖರ ಗುರೂಜಿ ತೋಟದ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದರ ಜೊತೆಗೆ ಕುಟುಂಬದವರ ಆರೋಗ್ಯವನ್ನು ವಿಚಾರಿಸಿಕೊಂಡಿದ್ದರು. ಈ ಕರೆ ಬಳಿಕ ರಮೇಶ್ ಅವರು ಕೆಲಸ ಮಾಡುತ್ತಿರುವಾಗ ಸಂಬಂಧಿಕರೊಬ್ಬರು ಟಿವಿ ನೋಡಿ ಎಂದಿದ್ದಾರೆ.
ರಮೇಶ್ ಅವರು ಟಿವಿ ಆನ್ ಮಾಡಿದಾಗ ಅದರಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಚುಚ್ಚಿ ಚುಚ್ಚಿ ಕೊಲೆ ಮಾಡುತ್ತಿರುವ ದೃಶ್ಯ ನೋಡಿ ದಿಗ್ಭ್ರಾಂತರಾಗಿದ್ದಾರೆ. ಕೆಲ ಕ್ಷಣದ ಹಿಂದೆ ಮಾತನಾಡಿದ್ದ ಚಂದ್ರಶೇಖರ ಗುರೂಜಿ ಇನ್ನಿಲ್ಲ ಎಂಬ ಸತ್ಯ ಅವರಿಗೆ ಆರಗಿಸಿಕೊಳ್ಳಲು ಆಗಿಲ್ಲ. ಇದೀಗ ದುಃಖದ ಮಡುವಿನಲ್ಲಿ ಮುಳುಗಿರುವ ರಮೇಶ್ ಕುಟುಂಬ ಹುಬ್ಬಳ್ಳಿಗೆ ತೆರಳಿದೆ.