ಶಿವಮೊಗ್ಗದಲ್ಲಿ ಕೋಮುದ್ವೇಷಕ್ಕೆ ಬಲಿಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದ್ದು, ಈವರೆಗೆ 2 ಕೋಟಿ ರೂಪಾಯಿಗಳಿಗೂ ಅಧಿಕ ನೆರವು ನೀಡಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 10 ಲಕ್ಷ ರೂಪಾಯಿ ನೀಡಿರುವುದು ಸೇರಿದಂತೆ ಹರ್ಷ ಅವರ ಮನೆಗೆ ಭೇಟಿ ನೀಡಿದ್ದ ರಾಜಕಾರಣಿಗಳು, ಮಠಾಧೀಶರು ಹಣದ ನೆರವು ನೀಡಿದ್ದಾರೆ.
ಅಲ್ಲದೆ ಹರ್ಷ ತಾಯಿ ಪದ್ಮಾ ಅವರ ಖಾತೆಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಹಲವರು ನೆರವಿಗೆ ಮನವಿ ಮಾಡಿದ್ದು ಈ ಮೂಲಕವೂ ಸಾಕಷ್ಟು ಹಣ ಜಮೆಯಾಗಿದೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಏಳು ವರ್ಷಗಳ ಹಿಂದೆ ಕೋಮು ದ್ವೇಷಕ್ಕೆ ಬಲಿಯಾಗಿದ್ದ ವಿಶ್ವನಾಥ ಶೆಟ್ಟಿ ಅವರ ತಾಯಿ ಮೀನಾಕ್ಷಿ ಅವರಿಗೂ ಸಹ ಸಾಕಷ್ಟು ನೆರವು ಹರಿದು ಬಂದಿದ್ದು, ಮೂರು ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಮೀನಾಕ್ಷಿ ಅವರು ಕಡು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.