ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ಚಂದ್ರಶೇಖರ ಗುರೂಜಿ, ಮಂಗಳವಾರದಂದು ಹುಬ್ಬಳ್ಳಿಯ ಉಣಕಲ್ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಬ್ಬರು ಹಂತಕರಿಂದ ಬರ್ಬರವಾಗಿ ಹತ್ಯೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಇಂದು ಅಂತ್ಯಕ್ರಿಯೆ ನಡೆಯಲಿದೆ.
ಹುಬ್ಬಳ್ಳಿಯ ಕೇಶವಪುರ ಸುಳ್ಳ ರೋಡ್, ಶಿವಪ್ರಭು ಲೇಔಟ್ ಹತ್ತಿರ ಇರುವ ಗುರೂಜಿಯವರ ಸ್ವಂತ ಜಮೀನಿನಲ್ಲಿ ಮಧ್ಯಾಹ್ನ 1:00 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದ್ದು ಅದಕ್ಕೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚಂದ್ರಶೇಖರ ಗುರೂಜಿಯವರ ಹಂತಕರನ್ನು ಪೊಲೀಸರು ಈಗಾಗಲೇ ಹೆಡೆಮುರಿ ಕಟ್ಟಿದ್ದು, ಮಹಾಂತೇಶ ಶಿರೂರ ಮತ್ತು ಮಂಜುನಾಥ ಎಂಬ ಈ ಆರೋಪಿಗಳು ಗುರೂಜಿಯವರ ಆಪ್ತ ವಲಯದಲ್ಲಿದ್ದರು ಎಂಬ ಸಂಗತಿ ಈಗ ಬಯಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.