ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮಂಗಳವಾರದಂದು ಅಭ್ಯರ್ಥಿಗಳು ಹಾಗೂ ಪಕ್ಷಗಳ ಕಾರ್ಯಕರ್ತರು ಮನೆಮನೆಗೆ ತೆರಳಿ, ಮತಯಾಚನೆ ಮಾಡಿದ್ದಾರೆ. ಇದರ ಮಧ್ಯೆ ಮತದಾರರ ಮನವೊಲಿಸಲು ತೆರೆಮರೆಯ ಕಸರತ್ತು ಸಹ ನಡೆದಿದೆ.
ಮತದಾರರಿಗೆ ಆಮಿಷ ಒಡ್ಡಲು ಕೆಲ ಅಭ್ಯರ್ಥಿಗಳು 500 ರಿಂದ 2000 ರೂಪಾಯಿಗಳವರೆಗೆ ನೀಡಿದ್ದಾರೆ ಎನ್ನಲಾಗಿದ್ದು, ಈ ಪೈಕಿ ನೈಜ ನೋಟುಗಳ ಮಧ್ಯೆ ಕೆಲ ಆಟಿಕೆ ನೋಟುಗಳನ್ನು ಸಹ ಇಟ್ಟಿದ್ದರು ಎಂದು ಹೇಳಲಾಗಿದೆ. ಇದನ್ನು ಅಭ್ಯರ್ಥಿಗಳು ಮಾಡಿದ್ದಾರೋ ಅಥವಾ ಹಂಚಲು ಬಂದ ಕಾರ್ಯಕರ್ತರ ಕೈವಾಡವೋ ತಿಳಿದು ಬಂದಿಲ್ಲ.
ಆದರೆ ಇಂತಹ ನೋಟುಗಳನ್ನು ಪಡೆದವರು ಚಲಾವಣೆಗೆ ಹೋದಾಗಲೇ ಅವುಗಳು ನಕಲಿ ನೋಟುಗಳು ಎಂದು ತಿಳಿದು ಕಂಗಾಲಾಗಿದ್ದಾರೆ. ಇಂಥವರದ್ದು ಈಗ ಹೇಳಲೂ ಆಗದ ಪರಿಸ್ಥಿತಿಯಾಗಿದೆ. ಹಣದ ಜೊತೆಗೆ ಕೆಲವೆಡೆ ಮದ್ಯವನ್ನು ಸಹ ವಿತರಿಸಲಾಗಿದೆ ಎನ್ನಲಾಗಿದ್ದು, ಅದೆಷ್ಟರ ಮಟ್ಟಿಗೆ ಕಳಪೆಯಾಗಿದೆ ಎಂಬುದು ಚುನಾವಣೆ ಮುಗಿದ ಬಳಿಕವಷ್ಟೇ ತಿಳಿಯಲಿದೆ.