ತುಮಕೂರು : 50 ರೂಪಾಯಿ ನೀಡುವುದಾಗಿ ವಿದ್ಯಾರ್ಥಿನಿಗೆ ಹೇಳಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಮುಖ್ಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಜಿಲ್ಲೆಯ ಶಿರಾ ನಗರದ ಬೇಗಂ ಮೊಹಲ್ಲಾದ ಉರ್ದು ಶಾಲೆಯಲ್ಲಿ ನಡೆದಿದೆ. ಮೊಹಮ್ಮದ್ ಇಕ್ಬಾಲ್ ಎಂಬ ಶಿಕ್ಷಕನ ವಿರುದ್ಧವೇ ಇಂತಹ ಆರೋಪ ಕೇಳಿ ಬಂದಿದ್ದು, ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳು ನೀಡಿದ್ದಾನೆ ಎನ್ನಲಾಗಿದೆ.
ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ
ಬಂಧಿತ ಶಿಕ್ಷಕನು ಕಳೆದ ಹಲವು ತಿಂಗಳುಗಳಿಂದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದ್ದು, ಅಶ್ಲೀಲ ಮಾತುಗಳನ್ನು ಆಡುತ್ತಿದ್ದ. ನೆಪ ಇಟ್ಟುಕೊಂಡು ಕೈ ಹಾಗೂ ಮೈ ಮುಟ್ಟುತ್ತಿದ್ದ ಎಂದು ವಿದ್ಯಾರ್ಥಿನಿಯ ಪಾಲಕರು ಆರೋಪಿಸಿದ್ದಾರೆ.
ಆರೋಪ ಕೇಳಿ ಬರುತ್ತಿದ್ದಂತೆ ಮುಖ್ಯ ಶಿಕ್ಷಕನನ್ನು ಜಿಲ್ಲಾ ಉಪ ನಿರ್ದೇಶಕ ಕೃಷ್ಣಮೂರ್ತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿದ್ಯಾರ್ಥಿನಿಯೊಬ್ಬಳು ಕಳೆದ 2 ತಿಂಗಳಿಂದ ಶಾಲೆ ಬಿಟ್ಟಿದ್ದಳು. ಆ ನಂತರ ಅವಳು ಶಾಲೆಗೆ ಹಾಜರಾಗಿದ್ದಳು. ಹೀಗೆ ಶಾಲೆಗೆ ಬಂದ ವಿದ್ಯಾರ್ಥಿನಿಗೆ ವಿಶೇಷ ತರಗತಿಯ ನೆಪದಲ್ಲಿ ತನ್ನ ಕಚೇರಿಗೆ ಕರೆಯಿಸಿಕೊಂಡು 50 ರೂಪಾಯಿ ಕೊಡುವುದಾಗಿ ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಘಟನೆಯ ನಂತರ ವಿದ್ಯಾರ್ಥಿನಿಯು ಪಾಲಕರಿಗೆ ಹೇಳಿದ್ದಾಳೆ. ಈ ಕುರಿತು ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.