ಪ್ರತಿದಿನ ಒಂದು ಹಣ್ಣು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಹಣ್ಣಿನ ಜ್ಯೂಸ್ ಕುಡಿಯುವುದು ಕೂಡ ಆರೋಗ್ಯಕರ. ಆದರೆ ತೂಕ ಇಳಿಸಲು ಹಣ್ಣು ತಿನ್ನುವುದು ಸೂಕ್ತವೇ ಅಥವಾ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕೆ ಎಂಬ ಗೊಂದಲ ಸಹಜ. ಕೆಲವು ಬೆಳಗ್ಗೆ ಹಣ್ಣು ಅಥವಾ ಹಣ್ಣಿನ ರಸದೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ನಮ್ಮ ದೇಹಕ್ಕೆ ಅನುಗುಣವಾಗಿ ಸೂಕ್ತವಾದ ಹಣ್ಣುಗಳನ್ನೇ ತಿನ್ನುವುದು ಬಹಳ ಮುಖ್ಯ.
ಹಣ್ಣುಗಳು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಹಣ್ಣುಗಳ ಸೇವನೆ ಬಳಿಕ ನಮ್ಮಲ್ಲಿ ಶಕ್ತಿ ಮತ್ತು ತಾಜಾತನ ಕಂಡುಬರುತ್ತದೆ.ಹಣ್ಣು ದೇಹಕ್ಕೆ ಅವಶ್ಯಕ, ಅದರಲ್ಲಿರುವ ನೈಸರ್ಗಿಕ ಸಿಹಿ ಅಥವಾ ಸಕ್ಕರೆ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನಬಹುದೇ? ಅಥವಾ ಜ್ಯೂಸ್ ಕುಡಿಯುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ತೂಕ ನಷ್ಟಕ್ಕೆ ಹಣ್ಣುಗಳು ತುಂಬಾ ಪರಿಣಾಮಕಾರಿ
ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ವಾಸ್ತವವಾಗಿ ಹಣ್ಣು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಹಾಗೆಯೇ ಹಣ್ಣು ತೂಕ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಣ್ಣುಗಳಲ್ಲಿರುವ ವಿಟಮಿನ್ ಗಳು, ಖನಿಜಾಂಶಗಳು, ಎಂಟಿಒಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್‌ಗಳು ದೇಹದಲ್ಲಿನ ದೀರ್ಘಕಾಲದ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಬಹಳ ಪರಿಣಾಮಕಾರಿ.
ಸೇಬು, ಪೀಚ್, ಸಿಟ್ರಸ್ ಹಣ್ಣುಗಳು ಮತ್ತು ದ್ರಾಕ್ಷಿಯನ್ನು ಸೇವಿಸಬಹುದು.ಇದರ ಜೊತೆಗೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ಧಾನ್ಯಗಳು, ತರಕಾರಿಗಳು, ಪ್ರೋಟೀನ್ ಇರಬೇಕು. ಹಣ್ಣಿನ ರಸವನ್ನು ಕುಡಿಯುವಾಗ ವಿಶೇಷ ಕಾಳಜಿ ವಹಿಸಿ. ಅನೇಕ ಹಣ್ಣುಗಳ ರುಚಿಯನ್ನು ಸವಿಯಲು ಬಯಸಿದರೆ ಜ್ಯೂಸ್ ಕುಡಿಯಬಹುದು. ಆದರೆ ಹಣ್ಣಿನ ರಸವನ್ನು ತಯಾರಿಸಿದ ನಂತರ ಅದರಲ್ಲಿರುವ ಫೈಬರ್ ಪ್ರಮಾಣವು ಕಡಿಮೆಯಾಗುತ್ತದೆ.
ಹಣ್ಣಿನ ರಸವನ್ನು ತಯಾರಿಸುವಾಗ ಅದರಲ್ಲಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತವೆ. ಸಕ್ಕರೆ ಮತ್ತು ಕ್ಯಾಲೋರಿ ಅಂಶ ಹೆಚ್ಚಾಗುತ್ತದೆ. ಹಾಗಾಗಿ ಜ್ಯೂಸ್‌ಗಿಂತ ಹಣ್ಣುಗಳನ್ನು ಹಾಗೇ ಸೇವಿಸುವುದು ಬಹಳ ಉತ್ತಮ. ತಾಜಾ ಹಣ್ಣಿನ ರಸವನ್ನು ಕುಡಿಯಬಹುದು, ಆದರೆ ಸಕ್ಕರೆ ಬೆರೆಸಿದ ಪ್ಯಾಕೇಜ್ಡ್ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಹಾನಿಕರ.