ಪ್ರತಿನಿತ್ಯ ಒಂದಲ್ಲ ಒಂದು ಹಣ್ಣು ತಿನ್ನಲೇಬೇಕು ಎಂಬುದು ವೈದ್ಯರ ಸಲಹೆ. ಹಣ್ಣುಗಳಲ್ಲಿ ಹೇರಳವಾದ ಜೀವಸತ್ವಗಳ ಆಗರ. ಆಯಾ ಋತುಮಾನಗಳಲ್ಲಿ ಸಿಗುವ ಸ್ಥಳೀಯ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು.
ಹಣ್ಣುಗಳನ್ನು ತಿನ್ನುವ ಕ್ರಮವೂ ಅಷ್ಟೇ ಮುಖ್ಯ. ರಸ್ತೆಯ ಯಾವುದೋ ಒಂದು ಮೂಲೆಯ ಜ್ಯೂಸ್ ಸೆಂಟರ್ ಗೆ ಹೋಗಿ ಒಂದು ಲೋಟ ಹಣ್ಣಿನ ರಸ ಕುಡಿದುಬಿಡುವುದು ಸುಲಭ. ಆದರೆ ಇದರಿಂದ ಹಣ್ಣು ಸೇವನೆಯ ಸಂಪೂರ್ಣ ಲಾಭ ಸಿಗುವುದಿಲ್ಲ.
ಚಾಕುವಿನಿಂದ ಕತ್ತರಿಸಿ, ಹೋಳುಗಳಾಗಿ ಮಾಡಿ ಹಣ್ಣನ್ನು ತಿನ್ನುವುದೂ ಅಷ್ಟೇನೂ ಲಾಭದಾಯಕವಲ್ಲ. ಸೇಬು, ಸೀಬೆ, ಮಾವು, ಕಬ್ಬು, ಮರಸೇಬು ಇವೇ ಮೊದಲಾದ ಹಣ್ಣುಗಳನ್ನು ಸ್ವಚ್ಚ ನೀರಿನಿಂದ ತೊಳೆದು, ಹಲ್ಲಿನಿಂದ ಕಚ್ಚಿ, ಚೆನ್ನಾಗಿ ಅಗೆದು ತಿನ್ನುವುದು ಸರಿಯಾದ ಕ್ರಮ. ಇದರಿಂದ ವಸಡುಗಳು ಗಟ್ಟಿಯಾಗುತ್ತದೆ. ಹಣ್ಣಿನ ಸ್ವಾದವೂ ಸಿಗುವುದಲ್ಲದೆ, ದೇಹಕ್ಕೆ ಅಗತ್ಯ ಜೀವಸತ್ವಗಳು ಸಂಪೂರ್ಣವಾಗಿ ಸಿಗುತ್ತದೆ.