ಭಾರತೀಯ ಜ್ಯೋತಿಷ್ಯದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಸಮುದ್ರ ಶಾಸ್ತ್ರದಲ್ಲಿ ಮನುಷ್ಯನ ದೇಹದ ಅನೇಕ ಭಾಗಗಳ ಬಗ್ಗೆ ಅಧ್ಯಯನ ಮಾಡಿ ಭವಿಷ್ಯ ಹಾಗೂ ಅಂಗಗಳ ಸಂಬಂಧದ ಬಗ್ಗೆ ಹೇಳಲಾಗಿದೆ. ವ್ಯಕ್ತಿಯ ಧ್ವನಿ, ಮಾತಿನಿಂದ ಹಿಡಿದು ಕೈ, ಕಾಲು ಬೆರಳಿನವರೆಗೆ ಎಲ್ಲ ಅಂಗವನ್ನು ನೋಡಿ ಆತನ ಭವಿಷ್ಯ ಹೇಳಲಾಗುತ್ತದೆ. ಸಮುದ್ರ ಶಾಸ್ತ್ರದಲ್ಲಿ ಮುನಷ್ಯನ ಹಣೆ ಬರಹದ ಬಗ್ಗೆಯೂ ಹೇಳಲಾಗಿದೆ.
ಕೈಗಳಲ್ಲಿ ಮಾತ್ರವಲ್ಲ ಹಣೆಯಲ್ಲೂ ಗೆರೆಗಳಿರುತ್ತವೆ. ಕೆಲವರ ಹಣೆಯ ಮೇಲಿನ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಮತ್ತೆ ಕೆಲವರ ಹಣೆ ಮೇಲಿನ ಗೆರೆಗಳು ಅಸ್ಪಷ್ಟವಾಗಿರುತ್ತವೆ. ಹಣೆಯ ಮೇಲೆ 7 ಗೆರೆಗಳಿರುತ್ತವೆ. ಅವು ವಿಭಿನ್ನ ಗ್ರಹಗಳಿಂದ ಪ್ರಭಾವಿತಗೊಂಡಿರುತ್ತವೆ.
ಬುಧ ರೇಖೆ ಎರಡು ಹುಬ್ಬುಗಳ ಮಧ್ಯೆ ಇರುತ್ತದೆ. ಇದು ಕೆಲವರಲ್ಲಿ ಉದ್ದವಾಗಿದ್ದರೆ ಮತ್ತೆ ಕೆಲವರಲ್ಲಿ ಸಣ್ಣದಾಗಿರುತ್ತದೆ. ಎರಡೂ ಕಿವಿಗಳ ಅಂಚಿನವರೆಗೆ ಈ ರೇಖೆ ಹೋಗಿದ್ದರೆ ಅವರು ಬುದ್ಧಿವಂತರಾಗಿರುತ್ತಾರೆ. ಅವರ ಸ್ಮರಣ ಶಕ್ತಿ ಉತ್ತಮವಾಗಿರುತ್ತದೆ. ಹಣದ ಬಗ್ಗೆ ಸಾಕಷ್ಟು ತಿಳಿದಿರುತ್ತಾರೆ.
ಶುಕ್ರ ರೇಖೆ, ಬುಧ ರೇಖೆಯ ಸ್ವಲ್ಪ ಕೆಳಗೆ ಇರುತ್ತದೆ. ಈ ರೇಖೆ ಸ್ಪಷ್ಟವಾಗಿರುವ ಜನರು ಅದೃಷ್ಟವಂತರು. ಸದಾ ಉತ್ಸಾಹ ಮತ್ತು ಶಕ್ತಿಯಿಂದ ಕೂಡಿರುತ್ತಾರೆ.
ಮಂಗಳ ರೇಖೆ, ಶುಕ್ರ ರೇಖೆಗಿಂತ ಸ್ವಲ್ಪ ಮೇಲಿರುತ್ತದೆ. ಇದು ಹಣೆಯ ಮಧ್ಯೆ ಇರುತ್ತದೆ. ಈ ಸಾಲು ಉದ್ದ ಹಾಗೂ ಸ್ಪಷ್ಟವಾಗಿರುವ ಜನರು ಸ್ಪಷ್ಟತೆ ಹೊಂದಿರುತ್ತಾರೆ. ಬೇಗನೆ ಕೋಪಗೊಳ್ಳುತ್ತಾರೆ. ಆದ್ರೆ ಎಲ್ಲವನ್ನೂ ಉತ್ಸಾಹದಿಂದ ಸ್ವೀಕರಿಸುತ್ತಾರೆ.
ಗುರು ರೇಖೆ, ಶುಕ್ರ ಮತ್ತು ಮಂಗಳ ರೇಖೆಗಿಂತ ಮೇಲಿರುತ್ತದೆ. ಇದು ಸ್ಪಷ್ಟ ಮತ್ತು ಸ್ವಲ್ಪ ಉದ್ದವಾಗಿರುವ ಜನರು ಆಧ್ಯಾತ್ಮಿಕದಲ್ಲಿ ಆಸಕ್ತಿ ಹೊಂದಿರುತ್ತಾರೆ. ಸಾರ್ವಜನಿಕವಾಗಿ ಬೆರೆಯುತ್ತಾರೆ. ತಮ್ಮ ಅಭಿಪ್ರಾಯಗಳಿಗೆ ದೃಢವಾಗಿರುತ್ತಾರೆ. ಮೊಂಡುತನ ಮಾಡುತ್ತಾರೆ.
ಶನಿ ರೇಖೆಯು ಗುರು ರೇಖೆಯ ಮೇಲೆ ಮತ್ತು ಹಣೆಯ ಮೇಲಿರುತ್ತದೆ. ಈ ರೇಖೆ ಸ್ಪಷ್ಟವಾಗಿರುವ ವ್ಯಕ್ತಿಗೆ ಹಣದ ಕೊರತೆ ಇರುವುದಿಲ್ಲ. ಗಂಭೀರ ಸ್ವಭಾವವನ್ನು ಹೊಂದಿರುತ್ತಾರೆ.
ಚಂದ್ರನ ರೇಖೆ ಹುಬ್ಬಿನ ಮೇಲೆ ಎಡಗಣ್ಣಿನ ಕಡೆಗೆ ಇರುತ್ತದೆ. ಇದು ಸ್ಪಷ್ಟವಾಗಿದ್ದರೆ ಮತ್ತು ಉದ್ದವಾಗಿದ್ದರೆ ಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಾರೆ. ಮಧ್ಯ ತುಂಡಾಗಿದ್ದರೆ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ.
ಸೂರ್ಯನ ರೇಖೆ ಬಲಗಣ್ಣಿನ ಕಡೆಗೆ ಹುಬ್ಬುಗಳ ಮೇಲಿರುತ್ತದೆ. ಈ ರೇಖೆ ಸ್ಪಷ್ಟ ಮತ್ತು ಉದ್ದವಾಗಿದ್ದರೆ ವ್ಯಕ್ತಿಯ ಭವಿಷ್ಯ ಉತ್ತಮವಾಗಿರುತ್ತದೆ.