ಮಕ್ಕಳ ಲಾಲನೆ ಪಾಲನೆ ಹೇಳಿದಷ್ಟು ಸುಲಭವಲ್ಲ. ಅತಿ ಮುದ್ದು ಒಂದು ರೀತಿ ಮಕ್ಕಳನ್ನು ಹಾಳು ಮಾಡಿದ್ರೆ ಪಾಲಕರ ಕೋಪ ಮತ್ತೊಂದು ರೀತಿಯಲ್ಲಿ ಮಕ್ಕಳನ್ನು ಹಾಳು ಮಾಡುತ್ತದೆ. ಮಕ್ಕಳ ಭಾವನೆಗಳನ್ನು ತಿಳಿದುಕೊಂಡು ನಡೆಯುವುದು ಪಾಲಕರಿಗೊಂದು ಸವಾಲಿನ ಕೆಲಸ.
ಮಕ್ಕಳನ್ನು ನಿಯಂತ್ರಿಸಲು ಅನೇಕ ಪಾಲಕರು ಕೈ ಎತ್ತುತ್ತಾರೆ. ಬೈದು ಬುದ್ದಿ ಹೇಳಲು ಮುಂದಾಗ್ತಾರೆ. ಆದ್ರೆ ಇದು ಮಕ್ಕಳ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ. ಅಳುವ ಜೊತೆಗೆ ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತಾರೆ. ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡ್ತಾರೆ. ಪಾಲಕರಿಗೆ ಹೊಡೆಯುತ್ತಾರೆ. ಪಾಲಕರ ಬೈಗುಳು ಮಕ್ಕಳಿಗೆ ಅಭ್ಯಾಸವಾಗಿ ಬಿಡುತ್ತದೆ. ಹಾಗಾಗಿ ಮಕ್ಕಳಿಗೆ ಬೈದು, ಹೊಡೆದು ಬುದ್ದಿ ಹೇಳುವ ಬದಲು ನಿಧಾನವಾಗಿ ಪ್ರೀತಿಯಿಂದ ಬುದ್ದಿ ಹೇಳಬೇಕು.
ಅವರು ಏನು ತಪ್ಪು ಮಾಡ್ತಿದ್ದಾರೆನ್ನುವುದನ್ನು ತಿಳಿಸಿ ಹೇಳಬೇಕು. ತಪ್ಪು ಮಾಡಿದ ತಕ್ಷಣ ಪಾಲಕರು ಕೈ ಎತ್ತಿದರೆ ಮಕ್ಕಳಿಗೆ ಪಾಲಕರ ಮೇಲಿರುವ ಗೌರವ, ಪ್ರೀತಿ ಕಡಿಮೆಯಾಗುತ್ತದೆ. ಅವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಾರೆ.
ಹಾಗಂತ ತುಂಬಾ ಪ್ರೀತಿ ಕೂಡ ಒಳ್ಳೆಯದಲ್ಲ. ಕೆಲವೊಂದು ಪಾಲಕರು ಮಕ್ಕಳು ತಪ್ಪು ಮಾಡಿದ್ರೂ ತಿದ್ದಿ ಬುದ್ದಿ ಹೇಳುವುದಿಲ್ಲ. ನಿನ್ನದೆ ಸರಿ ಎನ್ನುತ್ತ ಪ್ರೀತಿ ಮಾಡ್ತಾರೆ. ಈ ಅತಿ ಮುದ್ದು ಕೂಡ ಮುಂದೆ ಮಕ್ಕಳ ದಾರಿ ತಪ್ಪಿಸುತ್ತದೆ.
ಮಕ್ಕಳು ಹೇಳಿದಲ್ಲೆಲ್ಲ ಕಳುಹಿಸಬೇಡಿ. ಕೆಲವೊಂದು ಮಕ್ಕಳು ಎಲ್ಲ ಕಡೆ ಹೋಗುವ ಹಠ ಹಿಡಿಯುತ್ತಾರೆ. ಮಕ್ಕಳ ಹಠಕ್ಕೆ ಪಾಲಕರು ಒಪ್ಪಿಗೆ ನೀಡುತ್ತಾರೆ. ಇದ್ರಿಂದ ಮಕ್ಕಳಿಗೆ ಅತಿ ಸ್ವಾತಂತ್ರ್ಯ ಸಿಗುವುದರಿಂದ ಮುಂದೆ ತೊಂದರೆಯಾಗುತ್ತದೆ.