ಹಚ್ಚೆ ಹಾಕಿಸಿಕೊಳ್ಳೋದು ಈಗ ಫ್ಯಾಶನ್. ಪುರುಷರರಿರಲಿ ಮಹಿಳೆಯರೇ ಇರಲಿ ತಮಗಿಷ್ಟವಾಗುವ ಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆ ಹಾಕಿಸಲು ಅಥವಾ ತೆಗೆಯಲು ನೀವು ತಜ್ಞರ ಬಳಿಗೆ ಹೋಗಬೇಕು. ಇಲ್ಲಾಂದ್ರೆ ಚರ್ಮದ ತೊಂದರೆ, ತುರಿಕೆ ಗಾಯವಾಗುವ ಸಾಧ್ಯತೆಗಳು ಹೆಚ್ಚು. ಹಚ್ಚೆ ಹಾಕಿಸಲು ಯೋಚಿಸಿದ್ರೆ ನಿಮಗೆ ಇಲ್ಲಿವೆ ಕೆಲವು ಟಿಪ್ಸ್.
ಹಚ್ಚೆ ಹಾಕಿಸುವ ಮುಂಚೆ ಒಮ್ಮೆ ಯೋಚಿಸಿ. ಹಚ್ಚೆ ದೇಹದ ಮೇಲೆ ಖಾಯಂ ಆಗಿ ಉಳಿಯುತ್ತದೆ. ಅದನ್ನು ಮತ್ತೆ ತೆಗೆಯಬಹುದು. ಆದರೆ ಟ್ಯಾಟೂ ತೆಗೆಯಲು, ಹಾಕಿಸುವುದಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಲ್ಲದೆ ನೋವು ಕೂಡ ಹೆಚ್ಚು. ಹಾಗಾಗಿ ಮೊದಲೇ ಎಚ್ಚರಿಕೆಯಿಂದ ಯೋಚಿಸಿದ್ರೆ ಒಳ್ಳೆಯದು.
ಹಚ್ಚೆ ಹಾಕುವ ಮೊದಲು ನಿಮಗೆ ಅದರ ಅವಶ್ಯಕತೆ ಇದೆಯೋ ಇಲ್ಲವೋ ಪರೀಕ್ಷಿಸಿ. ಟ್ಯಾಟೂ ಹಾಕಿಸೋದೆ ಆದ್ರೆ ನೀವು ಹಚ್ಚೆ ಹಾಕಿಸುವ ಕಲಾವಿದರ ಬಗ್ಗೆ ಮತ್ತು ಅವರ ಕೆಲಸದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಅವರು ಒಳ್ಳೆ ಕಲಾವಿದರಾಗಿದ್ರೆ ನಿಮ್ಮ ಹಚ್ಚೆ ಸಹ ಚೆನ್ನಾಗಿ ಮೂಡಿಬರುತ್ತೆ. ಅಷ್ಟೇ ಅಲ್ಲದೆ ಅವರು ಚರ್ಮದ ಸುರಕ್ಷತೆಗಾಗಿ ಗ್ಲೌಸ್ ಗಳನ್ನು ಹಾಕಲೇಬೇಕು. ಇಲ್ಲದೆ ಹೋದ್ರೆ ಸೋಂಕಿನ ಅಪಾಯ ಖಂಡಿತ ತಪ್ಪಿದ್ದಲ್ಲ. ಬಳಸುವ ಬಣ್ಣಗಳು ಮತ್ತು ಡಿಸೈನ್ ಮತ್ತು ಅಕ್ಷರಗಳು ಸರಿಯಾಗಿವೆಯೋ ಇಲ್ಲವೋ ಎಂದು ಮೊದಲೇ ಪರಿಶೀಲಿಸಿಕೊಳ್ಳಿ.
ಹಚ್ಚೆ ಹಾಕಿಸಿದ ನಂತರ, ಆ ಭಾಗವನ್ನು ಚೆನ್ನಾಗಿ ನೋಡಿಕೊಳ್ಳಿ. ಟ್ಯಾಟೂ ಪೂರ್ತಿಯಾಗಿ ಒಣಗುವವರೆಗೂ ಉತ್ತಮ ಹೊಳಪು ಪಡೆಯಲು ಮಾಯಿಶ್ಚರೈಸರ್ ಅಥವಾ ಸನ್‌ಸ್ಕ್ರೀನ್ ಬಳಸಿ.
ವರ್ಣರಂಜಿತ ಹಚ್ಚೆಗಳನ್ನು ತೆಗೆಯುವುದು ಹೆಚ್ಚು ಕಷ್ಟ. ಎಲ್ಲಾ ಲೇಸರ್ ಯಂತ್ರಗಳು ವಿವಿಧ ಬಣ್ಣದ ಹಚ್ಚೆಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಬಣ್ಣದ ಹಚ್ಚೆ ಆಯ್ಕೆ ಮಾಡಿದ್ರೆ ಒಳ್ಳೇದು.