ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ತುಮಕೂರಿನ ವಕೀಲ ಮಹಾದೇವಯ್ಯ ಹಾಗೂ ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಬಂಧಿತರಾದವರಾಗಿದ್ದಾರೆ.
ಕಂಚುಗಲ್ ಬಂಡೆ ಮಠದ ಪೀಠಾಧಿಪತಿ ಆಗಬೇಕೆಂಬ ಹಂಬಲ ಹೊಂದಿದ್ದ ಮೃತ್ಯುಂಜಯ ಸ್ವಾಮೀಜಿ, ವಕೀಲ ಮಹದೇವಯ್ಯ ಅವರೊಂದಿಗೆ ಸೇರಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಉರ್ಫ್ ಚಂದು ಎಂಬಾಕೆಯನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಖೆಡ್ಡಾ ತೋಡಿದ್ದರು ಎನ್ನಲಾಗಿದೆ.
ಮೂಲತಃ ದೊಡ್ಡಬಳ್ಳಾಪುರದವಳಾದ ನೀಲಾಂಬಿಕೆ, ತನ್ನ ಅಜ್ಜಿ ಮನೆ ತುಮಕೂರಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ಸಿದ್ದಗಂಗಾ ಮಠ ಸೇರಿದಂತೆ ಕೆಲ ಶಾಖಾ ಮಠದ ಜೊತೆ ಒಡನಾಟ ಹೊಂದಿದ್ದಳು ಎನ್ನಲಾಗಿದೆ. ಮೃತ ಬಸವಲಿಂಗ ಶ್ರೀಗಳ ಜೊತೆಗೂ ಈಕೆ ಆತ್ಮೀಯ ಒಡನಾಟ ಹೊಂದಿದ್ದು, ಮಾತುಕತೆ ಸಂದರ್ಭದಲ್ಲಿ ಇತರ ಸ್ವಾಮೀಜಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು ಎನ್ನಲಾಗಿದೆ.
ಇದನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದ ಬಂಡೆ ಮಠದ ಬಸವಲಿಂಗ ಶ್ರೀಗಳು ಇದನ್ನು ಸಿದ್ದಗಂಗಾ ಮಠದ ಸ್ವಾಮೀಜಿಗಳಿಗೆ ಕೇಳಿಸಿದ್ದರು ಎನ್ನಲಾಗಿದೆ. ಆ ಬಳಿಕ ನೀಲಾಂಬಿಕೆಗೆ ಸಿದ್ದಗಂಗಾ ಮಠದ ಪ್ರವೇಶ ಬಂದ್ ಆಗಿದ್ದು, ಹೀಗಾಗಿ ಬಂಡೆ ಮಠದ ಶ್ರೀಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಳು ಎಂದು ಹೇಳಲಾಗಿದೆ.