ಪನೀರ್ ಅಂದ್ರೆ ಸಾಮಾನ್ಯವಾಗಿ ಎಲ್ರೂ ಇಷ್ಟಪಡ್ತಾರೆ. ಅದರ ವಿಶೇಷ ಟೇಸ್ಟ್ ಮತ್ತು ಫ್ಲೇವರ್ ಪಲಾವ್ ಅನ್ನು ಇನ್ನಷ್ಟು ಸ್ವಾದಿಷ್ಟಮಯವಾಗಿಸುತ್ತದೆ. ಅದರಲ್ಲೂ ಮನೆಯಲ್ಲೇ ಮಾಡಿದ ಪನೀರ್ ಆದ್ರೆ ಇನ್ನೂ ಉತ್ತಮ. ಪನೀರ್ ಪಲಾವ್ ಮಾಡೋದು ಕೂಡ ಬಹಳ ಸುಲಭ.
ಬೇಕಾಗುವ ಸಾಮಗ್ರಿ : 1 ಕಪ್ ಬಾಸುಮತಿ ಅಕ್ಕಿ, 4 ಕಪ್ ನೀರು, ಒಂದು ಲವಂಗದ ಎಲೆ, ಅರ್ಧ ಚಮಚ ಉಪ್ಪು, ಒಂದು ಚಮಚ ಎಣ್ಣೆ, ಒಂದು ಚಮಚ ಬೆಣ್ಣೆ, 8 ತುಂಡು ಪನೀರ್, ಒಂದು ಚಮಚ ಜೀರಿಗೆ, ಒಂದು ಇಂಚು ದಾಲ್ಚಿನಿ ತುಂಡು, 5 ಲವಂಗ, 10 ಕಾಳು ಮೆಣಸು, ಒಂದು ಈರುಳ್ಳಿ, ಒಂದು ಇಂಚು ಶುಂಠಿ ಹೆಚ್ಚಿದ್ದು, ಒಂದೆರಡು ಬೆಳ್ಳುಳ್ಳಿ, ಒಂದು ಹಸಿಮೆಣಸು, ಒಂದು ಟೊಮೆಟೋ, ಕಾಲು ಕಪ್ ಬಟಾಣಿ, ಒಂದು ಕ್ಯಾರೆಟ್, ಮುಕ್ಕಾಲು ಚಮಚ ಕೆಂಪು ಮೆಣಸು, ಅರ್ಧ ಚಮಚ ಗರಂ ಮಸಾಲಾ, ಕಾಲು ಕಪ್ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ಬಾಣಲೆಯಲ್ಲಿ ತುಪ್ಪ ಹಾಕಿ ಪನೀರ್ ತುಂಡುಗಳನ್ನು ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಅದನ್ನು ಪಕ್ಕಕ್ಕೆ ತೆಗೆದಿಡಿ. ಅದೇ ಬಾಣಲೆಯಲ್ಲಿ ಜೀರಿಗೆ, ದಾಲ್ಚಿನಿ ತುಂಡು, ಲವಂಗ, ಕಾಳು ಮೆಣಸು ಹಾಕಿ. ಅವುಗಳಿಂದ ಪರಿಮಳ ಹೊರಬರುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸನ್ನು ಹಾಕಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಮೆತ್ತಗಾಗುವರೆಗೆ ಹುರಿಯಿರಿ. ನಂತರ ಕ್ಯಾರೆಟ್ ಮತ್ತು ಬಟಾಣಿಯನ್ನು ಬೆರೆಸಿ.
ಅದಾದ ಮೇಲೆ ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ. ಪುಡಿ ಮಾಡಿಟ್ಟ ಪನೀರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಾದ ಮೇಲೆ ಹುರಿದಿಟ್ಟಿದ್ದ ಪನೀರ್ ತುಂಡುಗಳನ್ನು ಬೆರೆಸಿ. ನಂತರ ಬೇಯಿಸಿಟ್ಟುಕೊಂಡಿದ್ದ ಅನ್ನವನ್ನು ಹಾಕಿ ಬೆರೆಸಿ 5 ನಿಮಿಷಗಳವರೆಗೆ ಮಂದ ಉರಿಯಲ್ಲಿ ಮುಚ್ಚಿಡಿ. ಗ್ಯಾಸ್ ಆಫ್ ಮಾಡಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿದರೆ ಪನೀರ್ ಪಲಾವ್ ರೆಡಿ.