ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಕೇಂದ್ರ ಸರ್ಕಾರವು ಇತ್ತೀಚಿನ ತಂತ್ರಜ್ಞಾನವಾದ ಡ್ರೋನ್ ಹಾಗೂ ಉಪಗ್ರಹ ಚಿತ್ರಣಗಳನ್ನು ಬಳಸಿಕೊಂಡು 17.78 ಲಕ್ಷ ಎಕರೆ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ಸಮೀಕ್ಷೆ ಮಾಡಿದೆ.
ಕಂಟೋನ್ಮೆಂಟ್‌ಗಳ ಒಳಗೆ ಸುಮಾರು 1.61 ಲಕ್ಷ ಎಕರೆ ರಕ್ಷಣಾ ಭೂಮಿ ಮತ್ತು ಕಂಟೋನ್‌ಮೆಂಟ್‌ಗಳ ಹೊರಗೆ 16.17 ಲಕ್ಷ ಎಕರೆ ಪ್ರದೇಶವನ್ನು ಸರ್ವೇ ಮಾಡುವ ಬೃಹತ್ ಕಾರ್ಯವನ್ನು 2018 ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯು ಇದೀಗ ಪೂರ್ಣಗೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ, ಇತ್ತೀಚಿನ ಸರ್ವೇ ತಂತ್ರಜ್ಞಾನವನ್ನು ಬಳಸಿಕೊಂಡು ಸಂಪೂರ್ಣ ರಕ್ಷಣಾ ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ ಮತ್ತು ಹಲವಾರು ರಾಜ್ಯ ಸರ್ಕಾರಗಳ ಕಂದಾಯ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ಸಂಖ್ಯೆಯ ಪಾಕೆಟ್‌ಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ದೇಶದಲ್ಲಿ 9622.807 ಎಕರೆ ರಕ್ಷಣಾ ಭೂಮಿಯನ್ನು ಅತಿಕ್ರಮಿಸಲಾಗಿದೆ ಎಂದು ವರದಿಯಾದ ನಂತರ ಈ ಕಾರ್ಯಾಚರಣೆ ನಡೆಸಲಾಗಿದೆ.
ಡಿಫೆನ್ಸ್ ಎಸ್ಟೇಟ್ ಕಚೇರಿಗಳು ನಿರ್ವಹಿಸುವ ದಾಖಲೆಗಳ ಪ್ರಕಾರ, ರಕ್ಷಣಾ ಸಚಿವಾಲಯವು ಸುಮಾರು 17.99 ಲಕ್ಷ ಎಕರೆಗಳಷ್ಟು ದೊಡ್ಡ ಭೂಪ್ರದೇಶವನ್ನು ಹೊಂದಿದೆ, ಅದರಲ್ಲಿ ಸುಮಾರು 1.61 ಲಕ್ಷ ಎಕರೆ ಪ್ರದೇಶವು 62 ಅಧಿಸೂಚಿತ ಕಂಟೋನ್ಮೆಂಟ್‌ಗಳ ವ್ಯಾಪ್ತಿಯಲ್ಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಸುಮಾರು 16.38 ಲಕ್ಷ ಎಕರೆ ಪ್ರದೇಶವು ಕಂಟೋನ್ಮೆಂಟ್‌ಗಳ ಹೊರಗೆ ಅನೇಕ ಪಾಕೆಟ್‌ಗಳಲ್ಲಿ ಹರಡಿದೆ. 16.38 ಲಕ್ಷ ಎಕರೆ ಭೂಮಿಯಲ್ಲಿ, ಸುಮಾರು 18,000 ಎಕರೆಗಳು ರಾಜ್ಯದ ಹೈಯರ್ಡ್ ಲ್ಯಾಂಡ್ ಅಥವಾ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯ ಖಾತೆಯಲ್ಲಿ ದಾಖಲೆಗಳಿಂದ ಅಳಿಸಲು ಪ್ರಸ್ತಾಪಿಸಲಾಗಿದೆ.