ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಹಾಗೂ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ಗೆ ಇಂದು 21 ದಿನಗಳ ಪೆರೋಲ್ ಮಂಜೂರು ಮಾಡಲಾಗಿದೆ.
ಬಂಧನಕ್ಕೊಳಗಾದ ಬಳಿಕ ಸ್ವಯಂಘೋಷಿತ ದೇವ ಮಾನವ ರಾಮ್ ರಹೀಮ್ ಇದೇ ಮೊದಲ ಬಾರಿಗೆ ಪೆರೋಲ್ ಪಡೆದಿದ್ದಾರೆ. ಹರಿಯಾಣ ಸರ್ಕಾರವು ಪೆರೋಲ್ ನೀಡಿದ್ದು ಮೂರು ವಾರಗಳ ಕಾಲ ಡೇರಾ ಮುಖ್ಯಸ್ಥ ಜೈಲಿನ ಹೊರಗೆ ಇರಲಿದ್ದಾರೆ ಎಂದು ಜೈಲಾಧಿಕಾರಿಗಳು ಖಚಿತಪಡಿಸಿದ್ದಾರೆ.
ಕಾನೂನಿನ ಪ್ರಕಾರ ಪೆರೋಲ್ ಪಡೆಯುವುದು ಪ್ರತಿಯೊಬ್ಬ ಕೈದಿಯ ಹಕ್ಕಾಗಿದೆ ಎಂದು ಹರಿಯಾಣ ಜೈಲು ಸಚಿವ ರಂಜಿತ್ ಚೌಟಾಲಾ ಹೇಳಿದ್ದಾರೆ. ಹೀಗಾಗಿ ಇದೇ ಸೌಲಭ್ಯವನ್ನು ರಾಮ್ ರಹೀಮ್ಗೆ ನೀಡಲಾಗಿದೆ ಎಂದು ಹೇಳಿದರು.
ಡೇರಾ ಮುಖ್ಯಸ್ಥನ ಮೂರು ವಾರಗಳ ಪೆರೋಲ್ ಇದೇ ತಿಂಗಳ 20ರಿಂದ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಕ್ರಮವಾಗಿದೆ ಎಂದು ಹೇಳಲಾಗುತ್ತಿದೆ. ಸಿರ್ಸಾ ಮೂಲದ ಪಂಥದ ನಾಯಕ ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಈಗಾಗಲೆ ತನ್ನ ಇಬ್ಬರು ಶಿಷ್ಯೆಯಂದಿರ ಮೆಲೆ ಅತ್ಯಾಚಾರ ಎಸಗಿದ್ದು ಹಾಗೂ ಪತ್ರಕರ್ತನ ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷಗಳ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸ್ವಯಂ ಘೋಷಿತ ದೇವಮಾನವ ರಾಮ ರಹೀಮನಿಗೆ ಕಳೆದ ವರ್ಷದ ಆರಂಭದಲ್ಲಿ ಮಾಜಿ ಪಂಥದ ನಿರ್ವಾಹಕನ ಮೇಲೆ ಹತ್ಯೆ ಎಸಗಿದ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.