ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಹುಟ್ಟುಹಬ್ಬದ ಪೂರ್ವ ಸಿದ್ಧತೆಗಾಗಿ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿರುವ ಅವರು, ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಮೂಲಕ ಪಕ್ಷದ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಮೀರ್ ಅಹ್ಮದ್ ಅವರ ಅನಗತ್ಯ ಹೇಳಿಕೆಗಳ ಕೆಲವೊಂದು ವಿಚಾರ ಪಕ್ಷದ ಹೈಕಮಾಂಡ್ ನಾಯಕರನ್ನೂ ತಲುಪಿದ್ದು, ಇನ್ನು ಮುಂದೆ ಈ ರೀತಿಯ ಮಾತುಗಳನ್ನು ಆಡದಂತೆ ಅವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ನಿಮ್ಮ ಇತ್ತೀಚಿನ ಸಾರ್ವಜನಿಕ ಟೀಕೆಗಳು ಅನಗತ್ಯ ಮತ್ತು ಕಳಪೆ ಅಭಿರುಚಿಯಲ್ಲಿವೆ ಎಂದು ಜಮೀರ್ ಅಹಮದ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಜಮೀರ್ ಅಹ್ಮದ್ ರವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಸ್ವಪಕ್ಷೀಯ ಶಾಸಕನ ವಿರುದ್ಧವೇ ಗರಂ ಆಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ‘ಸಿದ್ದರಾಮೋತ್ಸವ’ ಪೂರ್ವಭಾವಿ ಸಭೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಗೈರು ಹಾಜರಾಗಿದ್ದು, ಇದಕ್ಕೆ ಜಮೀರ್ ಅಹ್ಮದ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಭೆಗೆ ಶಾಸಕ ಪ್ರಸಾದ್ ಅಬ್ಬಯ್ಯ ಬಂದಿಲ್ಲ. ಅವರ ಮಗನಿಗೆ ಜ್ವರ ಬಂದಿದೆಯಂತೆ. ಚುನಾವಣೆ ಸಂದರ್ಭದಲ್ಲಿ ಹೀಗೆ ಜ್ವರ ಇದ್ದರೆ ಅವರು ಬರುತ್ತಿರಲಿಲ್ಲವೇ ಎಂದು ಪ್ರಶ್ನಿಸಿರುವ ಜಮೀರ್ ಅಹಮದ್, ಒಂದು ಲಕ್ಷ ಜನ ಅಲ್ಪಸಂಖ್ಯಾತರು ಹುಬ್ಬಳ್ಳಿಯಲ್ಲಿದ್ದಾರೆ. ಪ್ರಸಾದ್ ಅಬ್ಬಯ್ಯ ನಮ್ಮ ಬಳಿ ಬರಲೇಬೇಕು. ಆಗ ನಮಗೂ ಜ್ವರ ಬರಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.