ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗಲೇ ತಮ್ಮ ಪಕ್ಷದ ಕೆಲವರು ನೀಡುತ್ತಿರುವ ಹೇಳಿಕೆಗಳಿಂದ ಬಿಜೆಪಿ ನಾಯಕರು ತೀವ್ರ ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ಪಾಲಿಗೆ ಮಗ್ಗುಲ ಮುಳ್ಳಾಗಿದ್ದಾರೆ.
ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕೂಡ ಆಗಾಗ ನೀಡುವ ಹೇಳಿಕೆಗಳು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೊಂದು ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಸಂಚಲನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಬೇಕೆಂದರೆ 2,500 ಕೋಟಿ ರೂಪಾಯಿ ರೆಡಿ ಮಾಡಿಟ್ಟುಕೊಳ್ಳಿ ಎಂದು ದೆಹಲಿಯಿಂದ ಕೆಲವರು ಕೇಳಿಕೊಂಡು ಬಂದಿದ್ದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಇದು ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ಅಚ್ಚರಿಯ ಸಂಗತಿಯೆಂದರೆ ಬಸನಗೌಡ ಪಾಟೀಲ್ ಹಾಗೂ ವಿಶ್ವನಾಥ್ ಪದೇ ಪದೇ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ ಸಹ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಇತರೆ ಯಾವುದೇ ನಾಯಕರು ಚಕಾರ ಎತ್ತುತ್ತಿಲ್ಲ.