ಸ್ವಂತ ಸೂರು ಹೊಂದುವುದು ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇಂಥವರ ಕನಸು ಸಾಕಾರ ಮಾಡಲೆಂದೇ ಸರ್ಕಾರಗಳು ವಿವಿಧ ಯೋಜನೆಗಳನ್ನು ಘೋಷಿಸುತ್ತವೆ. ಈಗ ಶಿವಮೊಗ್ಗ ನಗರ ಜನತೆಗೆ ಅಂತಹದೊಂದು ಅವಕಾಶ ಒದಗಿ ಬಂದಿದೆ.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ನಗರ ಆಶ್ರಯ ಸಮಿತಿಯು ಗೋಪಿ ಶೆಟ್ಟಿಕೊಪ್ಪ ಗ್ರಾಮದಲ್ಲಿ 19 ಎಕರೆ 23 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಜಿ ಪ್ಲಸ್ 2 ಮಾದರಿ ಮನೆಗಳನ್ನು ನಿವೇಶನ ರಹಿತರಿಗೆ ಹಂಚಲು ಹೊಸದಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
18 ವರ್ಷ ಮೇಲ್ಪಟ್ಟ ಅರ್ಹ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, (ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ಅಂಗವಿಕಲರು, ವಿಧುರ ಹಾಗೂ ಹಿರಿಯ ನಾಗರಿಕರು) shivamoggacitycorp.org ವೆಬ್ಸೈಟ್ ಮೂಲಕ ಜುಲೈ 31 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ಶಿವಮೊಗ್ಗ ನಗರ ನಿವಾಸಿ ಆಗಿರಬೇಕಿದ್ದು, ಬಿಪಿಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು. ಅರ್ಜಿದಾರ ಅಥವಾ ಅವರ ಕುಟುಂಬದವರು ಸ್ವಂತ ನಿವೇಶನ ಅಥವಾ ಮನೆ ಹೊಂದಿರಬಾರದು. ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ವೆಬ್ಸೈಟ್ ವೀಕ್ಷಿಸಬಹುದಾಗಿದೆ.