ತಮ್ಮದೇ ಆದ ಸ್ವಂತ ಸೂರನ್ನು ಹೊಂದಬೇಕೆಂಬುದು ಬಹುತೇಕ ಎಲ್ಲರ ಕನಸು. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವನೆಯಿರುತ್ತದೆ. ಆದರೆ ಬೆಂಗಳೂರಿನಲ್ಲಿ ಬಡ ಜನತೆ ಮನೆ ಕೊಳ್ಳುವುದಿರಲಿ ಚಿಕ್ಕದೊಂದು ಸೈಟ್ ಖರೀದಿಸುವುದೂ ಕಷ್ಟದ ಮಾತೇ ಸರಿ. ಇದೀಗ ಆರ್ಥಿಕವಾಗಿ ಹಿಂದುಳಿದ ಬೆಂಗಳೂರಿನ ಜನತೆಗೆ ಭರ್ಜರಿ ಸಿಹಿ ಸುದ್ದಿಯೊಂದು ಇಲ್ಲಿದೆ.
ಹೌದು, ಸುಪ್ರೀಂ ಕೋರ್ಟ್ ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ನೀಡುವಂತೆ ನಿರ್ದೇಶನ ನೀಡಿರುವುದರ ಹಿನ್ನಲೆಯಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 150 ಎಕರೆ ಭೂಮಿಯನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ. ಇಲ್ಲಿ ಸುಮಾರು 15 ಸಾವಿರ ಫ್ಲಾಟ್ ಗಳನ್ನು ನಿರ್ಮಿಸಿ ಅದನ್ನು ಕೈಗೆಟುಕುವ ದರದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀಡಲಾಗುತ್ತದೆ.
ಆರ್ಥಿಕ ಹಿಂದುಳಿದ ವರ್ಗ (ಇ ಡಬ್ಲು ಎಸ್) ಯೋಜನೆಯಡಿ ಸಾಮಾನ್ಯವಾಗಿ ಈವರೆಗೆ 300 ಚದರಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿತ್ತು. ಆದರೆ ಇವು ತುಂಬಾ ಚಿಕ್ಕದಾಗುವ ಕಾರಣ ಕನಿಷ್ಟ 500 ಚದರಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಡುಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರು ಸಲಹೆ ನೀಡಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೂ ರಾಜ್ಯ ರಾಜಧಾನಿಯಲ್ಲಿ ಸ್ವಂತ ಸೂರು ಹೊಂದುವ ಕನಸು ನನಸಾಗಲಿದೆ.