
ಇಪ್ಪತ್ತು ವರ್ಷಗಳಿಗಾಗಿ ಗೃಹ ಸಾಲ ಪಡೆದು 24 ವರ್ಷಗಳವರೆಗೂ ಇಎಂಐ ಕಟ್ಟೋದನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಯಾಕಂದ್ರೆ ದಿನೇ ದಿನೇ ಗೃಹಸಾಲದ ಮೇಲಿನ ಬಡ್ಡಿದರ ಏರುತ್ತಲೇ ಇದೆ. ಕಳೆದ 2-3 ವರ್ಷಗಳಿಂದೀಚೆಗೆ ಹೋಮ್ ಲೋನ್ ಪಡೆದವರಿಗಂತೂ ಹೊಸದೊಂದು ತಲೆನೋವು ಶುರುವಾಗಿದೆ.
ಸಾಲದ ಅವಧಿಗಿಂತಲೂ ದೀರ್ಘಾವಧಿವರೆಗೆ ಅದನ್ನು ಭರಿಸಬೇಕಾಗಿ ಬಂದಿದೆ. ಶೇ.6.5ರಷ್ಟಿದ್ದ ಗೃಹ ಸಾಲದ ಮೇಲಿನ ಬಡ್ಡಿ ದರ ಕಳೆದ 5 ತಿಂಗಳುಗಳಲ್ಲಿ ಶೇ.8.25ರಷ್ಟಾಗಿದೆ. 2019ರಲ್ಲಿ 20 ವರ್ಷಗಳ ಅವಧಿಗೆ ಶೇ.6.7ರ ಬಡ್ಡಿದರದಲ್ಲಿ ಗೃಹಸಾಲ ಪಡೆದವರು 21 ವರ್ಷಗಳವರೆಗೂ ಇಎಂಐ ಪಾವತಿಸಬೇಕಿದೆ.
2022ರಲ್ಲಿ ರೆಪೋ ದರ ಏರುತ್ತಲೇ ಸಾಗಿರುವುದೇ ಈ ಬದಲಾವಣೆಗಳಿಗೆ ಕಾರಣ. ರೆಪೋ ದರ ಹೆಚ್ಚಳದಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ಕೂಡ ಗಗನಮುಖಿಯಾಗಿದೆ. ಸಾಲ ಪಡೆದ ಅವಧಿಗಿಂತಲೂ ಹೆಚ್ಚಿನ ಸಮಯದವರೆಗೆ ಇಎಂಐ ಪಾವತಿಸುವುದನ್ನು ತಪ್ಪಿಸಿಕೊಳ್ಳಬೇಕೆಂದರೆ ಸಾಲಗಾರರ ಬಳಿ ಎರಡು ಆಯ್ಕೆಗಳಿವೆ. ಮೊದಲನೆಯದಾಗಿ ಇಎಂಐ ಮೊತ್ತವನ್ನು ಹೆಚ್ಚಿಸಿಕೊಂಡು ಬೇಗನೆ ಸಾಲದಿಂದ ಮುಕ್ತಿ ಹೊಂದುವುದು. ಎರಡನೆಯದಾಗಿ ಒಟ್ಟೊಟ್ಟಿಗೆ ದೊಡ್ಡ ಮೊತ್ತವನ್ನು ಪಾವತಿಸುವ ಮೂಲಕ ಬಹುಬೇಗ ಸಾಲದ ಭಾರವನ್ನು ಇಳಿಸಿಕೊಳ್ಳಬಹುದು.