ಪತ್ನಿಯ ಮೇಲೆ ಹಲ್ಲೆ ನಡೆಸಿ ತಲೆ ತಪ್ಪಿಸಿಕೊಂಡ ತಿರುಗುತ್ತಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಗುಜರಾತಿನಲ್ಲಿ ಬಂಧಿಸಿದ್ದಾರೆ. ಇದರ ಮಧ್ಯೆ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯಿಂದ ಹಿಡಿದು ವರ್ಗಾವಣೆವರೆಗೆ ಹಲವು ದಂಧೆ ನಡೆಸುತ್ತಿರುವ ವಿಷಯ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು, ಇದರ ಹಿಂದಿನ ಕಾರಣ ಇಲ್ಲಿದೆ.
ಮೂಲತಃ ಮಂಡ್ಯ ಜಿಲ್ಲೆಯವನಾದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನಿವೃತ್ತ ಅಬಕಾರಿ ಅಧಿಕಾರಿಯೊಬ್ಬರ ಪುತ್ರ. 1995 ರಿಂದಲೇ ಸ್ಯಾಂಟ್ರೋ ರವಿ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮೈಸೂರಿನ ವಿಜಯನಗರದಲ್ಲಿ ಫೈನಾನ್ಸ್ ಕಂಪನಿ ಆರಂಭಿಸಿದ್ದ. ಇಲ್ಲಿ ಕೆಲಸ ಮಾಡಲು ಯುವತಿ ಬೇಕಾಗಿದ್ದಾರೆ ಎಂದು ಮೂರು ವರ್ಷಗಳ ಹಿಂದೆ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿದ್ದ.
ಈ ಜಾಹೀರಾತು ನೋಡಿ ಯುವತಿಯೊಬ್ಬರು ಅರ್ಜಿ ಹಾಕಿದಾಗ ಆಕೆಗೆ ಕೆಲಸ ನೀಡಿದ್ದು, ಒಮ್ಮೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯ ಕ್ಷಮೆ ಕೋರಿ ಮದುವೆಯನ್ನೂ ಮಾಡಿಕೊಂಡಿದ್ದ. ಇದರ ಮಧ್ಯೆಯೂ ಸ್ಯಾಂಟ್ರೋ ರವಿ ವೇಶ್ಯಾವಾಟಿಕೆ ದಂಧೆಯನ್ನು ಮುಂದುವರಿಸಿದ್ದು, ಜೊತೆಗೆ ವರ್ಗಾವಣೆಯಲ್ಲೂ ತೊಡಗಿಕೊಂಡಿದ್ದ.
ಮೂರು ತಿಂಗಳ ಹಿಂದೆ ತನ್ನ ಪತ್ನಿಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಲಗುವಂತೆ ಪುಸಲಾಯಿಸಿದ್ದು, ಇದರಿಂದ ನಮಗೆ ಬಹಳ ದುಡ್ಡು ಸಿಗುತ್ತದೆ ಎಂದು ಆಮಿಷ ಒಡ್ಡಿದ್ದ. ಆದರೆ ಇದಕ್ಕೆ ಆಕೆ ಸೊಪ್ಪು ಹಾಕದೆ ಮನೆಯಿಂದ ಹೋಗಿದ್ದು, ಇದೇ ಸಂದರ್ಭದಲ್ಲಿ ಸ್ಯಾಂಟ್ರೋ ರವಿಗೆ ಸೇರಿದ ಲ್ಯಾಪ್ಟಾಪ್ ಕಾಣೆಯಾಗಿತ್ತು.
ಇದರಲ್ಲಿ ಆತನ ಎಲ್ಲ ಕೃತ್ಯಗಳು ಸಹ ದಾಖಲಾಗಿದ್ದು ಇದು ಎಲ್ಲಿ ಬಯಲಾಗುತ್ತದೋ ಎಂಬ ಭಯದಿಂದ ತನ್ನ ಪತ್ನಿಯ ವಿರುದ್ಧವೇ ದೂರು ನೀಡಿ ಜೈಲಿಗೆ ಹಾಕಿಸಿದ್ದ. ಈ ಒಂದು ಕಾರಣದಿಂದ ಸ್ಯಾಂಟ್ರೋ ರವಿಯ ಕುಕೃತ್ಯಗಳು ಬಹಿರಂಗವಾಯಿತು. ಜಾಮೀನಿನ ಮೇಲೆ ಬಂದ ಆಕೆ ಸ್ಯಾಂಟ್ರೋ ರವಿಯ ಸಂಪೂರ್ಣ ವೃತ್ತಾಂತ ಬಿಚ್ಚಿಟ್ಟಿದ್ದು ಇದೀಗ ಆತನ ಬಂಧನವಾಗಿದೆ.