ಗೋವಾದ ಅಸ್ಸಾಗಾವೊನಲ್ಲಿರುವ ಸಿಲ್ಲಿ ಸೋಲ್ಸ್ ಕೆಫೆ & ಬಾರ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಗೆ ಸೇರಿದ್ದು ಅಂತಾ ಕಾಂಗ್ರೆಸ್ ಆರೋಪ ಮಾಡಿತ್ತು. ಮೃತಪಟ್ಟಿರೋ ವ್ಯಕ್ತಿಯ ಹೆಸರಲ್ಲಿ ಬಾರ್ ಅನ್ನು ಸಚಿವೆಯ ಪುತ್ರಿ ನವೀಕರಣ ಮಾಡಿಕೊಂಡಿದ್ದಾರೆ ಅಂತಾ ದೂರಿತ್ತು. ಆದ್ರೀಗ ಅಲ್ಲಿನ ಸ್ಥಳೀಯ ಕುಟುಂಬವೊಂದು ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಸಿಲ್ಲಿ ಸೋಲ್ಸ್ ಕೆಫೆ & ಬಾರ್ ತಮಗೆ ಸೇರಿದ್ದು. ಸಂಪೂರ್ಣವಾಗಿ ನಮ್ಮ ಕುಟುಂಬದ ಒಡೆತನದಲ್ಲಿಯೇ ಇದೆ. ಇನ್ಯಾವ ಹೊರಗಿನ ವ್ಯಕ್ತಿಗಳೂ ಇದರಲ್ಲಿ ಭಾಗಿಯಾಗಿಲ್ಲವೆಂದು ಆ ಕುಟುಂಬ ಅಬಕಾರಿ ಆಯುಕ್ತರಿಗೆ ಮಾಹಿತಿ ನೀಡಿದೆ. ಈ ಬಾರ್ ಮರ್ಲಿನ್ ಆಂಥೋನಿ ಡಿ ಗಾಮಾ ಮತ್ತವರ ಪುತ್ರ ಡೀನ್ ಡಿ ಗಾಮಾಗೆ ಸೇರಿದೆ. ತಾವು ಗೋವಾದ ಅಬಕಾರಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. 2021ರ ಮೇನಲ್ಲಿ ಆಂಥೋನಿ ಡಿ ಗಾಮಾ ಮೃತಪಟ್ಟಿದ್ದು, ಅವರ ಹೆಸರಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಬಾರ್ ಲೈಸನ್ಸ್ ನವೀಕರಣ ಮಾಡಲಾಗಿದೆ ಎಂದು ವಕೀಲ ಅರೀಸ್ ರೋಡ್ರಿಗಸ್ ದೂರು ನೀಡಿದ್ದರು.
ಆಂಥೋನಿ ಜೊತೆಗೆ ಪತ್ನಿ ಮರ್ಲಿನ್ ಕೂಡ ಬಾರ್ & ರೆಸ್ಟೋರೆಂಟ್‌ಗೆ ಜಾಯಿಂಟ್ ಔನರ್ ಆಗಿದ್ದರಿಂದ ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ ಎಂದು ಆ ಕುಟುಂಬ ಹೇಳಿದೆ. ಕೆಲ ತಿಂಗಳುಗಳ ಹಿಂದಷ್ಟೆ ಡೀನ್ ಸಹ ಪತ್ನಿಯನ್ನು ಕಳೆದುಕೊಂಡಿದ್ದು, ಹಸುಗೂಸಿನ ಜವಾಬ್ಧಾರಿ ಆತನ ಮೇಲಿದೆ. ಈಗಾಗ್ಲೇ 75 ದಾಟಿರೋ ಮರ್ಲಿನ್ ಕೂಡ ಅಸಹಾಯಕರಾಗಿರೋದ್ರಿಂದ ಈ ರೆಸ್ಟೋರೆಂಟ್ ಒಂದೇ ಅವರಿಗೆ ಆದಾಯದ ಮೂಲ. ಸುಖಾಸುಮ್ಮನೆ ದೂರು ನೀಡಿದ್ದರಿಂದ ತಮಗೆ ಮಾನಸಿಕವಾಗಿ ಒತ್ತಡ ಉಂಟಾಗಿದೆ ಎಂದು ಮರ್ಲಿನ್ ಹಾಗೂ ಡೀನ್ ಆರೋಪಿಸಿದ್ದಾರೆ.
ಸ್ಮೃತಿ ಇರಾನಿ ಪುತ್ರಿಯದ್ದು ಎನ್ನಲಾದ ಸಂದರ್ಶನವೊಂದರಲ್ಲಿ ಆಕೆಯನ್ನು ಉದ್ಯಮಿ ಎಂದು ಪರಿಚಯಿಸಲಾಗಿತ್ತು. ಆಕೆ ಸಿಲ್ಲಿ ಸೋಲ್ಸ್ ಕೆಫೆ & ಬಾರ್‌ನ ಮಾಲೀಕಳೆಂದು ಹೇಳಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಆದ್ರೆ ಇದನ್ನು ನಿರಾಕರಿಸಿದ್ದ ಸಚಿವೆ ಸ್ಮೃತಿ ಇರಾನಿ, ತಮ್ಮ 19 ವರ್ಷದ ಮಗಳು ಕೇವಲ ವಿದ್ಯಾಭ್ಯಾಸದಲ್ಲಿ ತೊಡಗಿರುವುದಾಗಿ ಸ್ಪಷ್ಟನೆ ಕೊಟ್ಟಿದ್ದರು. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದರು.