ಹಬ್ಬಗಳ ಸಂದರ್ಭದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸೇರಿದಂತೆ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸಲಾಗುತ್ತದೆ. ಹೀಗಾಗಿಯೇ ಇಂತಹ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಖರೀದಿಗೆ ಬಹುತೇಕರು ಮುಂದಾಗುತ್ತಾರೆ.
ಈ ರೀತಿ ಖರೀದಿ ಮಾಡಲು ಚಿಂತನೆ ನಡೆಸಿರುವವರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದರೆ ಈಗಲೇ ಖರೀದಿಸುವುದು ಸೂಕ್ತ. ಏಕೆಂದರೆ ಅಕ್ಟೋಬರ್ – ಡಿಸೆಂಬರ್ ವೇಳೆಗೆ ಸ್ಮಾರ್ಟ್ಫೋನ್ ಬೆಲೆಗಳು ಶೇಕಡ 5 ರಿಂದ 7 ರಷ್ಟು ಏರಿಕೆಯಾಗಲಿವೆ ಎಂದು ಹೇಳಲಾಗಿದೆ.
ಹೌದು, ದೇಶಿಯವಾಗಿ ತಯಾರಾಗುತ್ತಿರುವ ಬಹುತೇಕ ಸ್ಮಾರ್ಟ್ ಫೋನ್ ಗಳ ಬಿಡಿ ಭಾಗಗಳನ್ನು ಅಮದು ಮಾಡಿಕೊಳ್ಳಲಾಗುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಮಂಕಾಗುತ್ತಿರುವ ಕಾರಣ ಬಿಡಿಭಾಗಗಳ ಬೆಲೆ ಏರಿಕೆಯಾಗಿದೆ.
ಈಗಾಗಲೇ ಇದರ ಹೊರೆ ಸ್ಮಾರ್ಟ್ ಫೋನ್ ತಯಾರಕರಿಗೆ ಬಿದ್ದಿದ್ದು, ಆದರೆ ಹಬ್ಬದ ಋತುವಿನ ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ ಆಮದು ವೆಚ್ಚವನ್ನು ಕಂಪನಿಗಳೇ ಸದ್ಯಕ್ಕೆ ಭರಿಸುತ್ತಿವೆ. ಇದರ ಹೊರೆಯನ್ನು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಲಿದ್ದು, ಹೀಗಾಗಿ ಸ್ಮಾರ್ಟ್ ಫೋನ್ ಗಳ ಬೆಲೆ ಏರಿಕೆಯಾಗಲಿದೆ.