ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಚಟ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಪರಿಸ್ಥಿತಿ ಕೈಮೀರುವ ಮೊದಲೇ ಫೋನ್ ಬಳಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿ. ನಾವು ಸ್ಮಾರ್ಟ್ಫೋನ್ ಚಟವನ್ನು ಜಯಿಸಲು ಕೆಲವೊಂದು ಸರಳ ಸೂತ್ರಗಳಿವೆ. ಇವುಗಳನ್ನು ಪಾಲಿಸಿದ್ರೆ ನಿಮ್ಮ ಒಟ್ಟಾರೆ ಆರೋಗ್ಯ ಕೂಡ ಸುಧಾರಿಸುವುದರಲ್ಲಿ ಅನುಮಾನವಿಲ್ಲ.
ಫೋನ್ ಬಳಕೆಯನ್ನು ಮೇಲ್ವಿಚಾರಣೆ ಮಾಡಿ
ನಿಮ್ಮ ಫೋನ್ನ ಬಳಕೆಯ ಮಾದರಿಗಳನ್ನು ಟ್ರ್ಯಾಕ್ ಮಾಡುವ ಮೂಲಕ, ಹೆಚ್ಚು ಸಮಯ ಬಳಸುವ ಅಪ್ಲಿಕೇಶನ್ಗಳು ಮತ್ತು ಚಟುವಟಿಕೆಗಳನ್ನು ಗುರುತಿಸಿ. ಈ ಮೂಲಕ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಪ್ರಯತ್ನಿಸಿ ಜೊತೆಗೆ ಪ್ರಯೋಜನಕಾರಿಯಾದ ಅಪ್ಲಿಕೇಶನ್ಗಳನ್ನು ಮಾತ್ರ ಬಳಸಿ.
ಟಾರ್ಗೆಟ್ ಹೊಂದಿಸಿಕೊಳ್ಳಿ
ಫೋನ್ ಅನ್ನು ಯಾವೆಲ್ಲಾ ರೀತಿಯಲ್ಲಿ ಬಳಸುತ್ತಿದ್ದೀರಿ ಎಂಬುದನ್ನು ಲೆಕ್ಕಾಚಾರ ಮಾಡಿದ ನಂತರ, ನಿಮಗಾಗಿ ಟಾರ್ಗೆಟ್ ಹೊಂದಿಸಿ. ಮೊದಲು ಸ್ಕ್ರೀನ್ ಟೈಮ್ ಅನ್ನು ಶೇ.10ರಷ್ಟು ಕಡಿಮೆ ಮಾಡಿ. ಅದನ್ನು ಕ್ರಮೇಣ ಹೆಚ್ಚಿಸಿ.
ನೋಟಿಫಿಕೇಶನ್ಗಳನ್ನು ಆಫ್ ಮಾಡಿ
ನೋಟಿಫಿಕೇಶನ್ಗಳು ಸ್ಮಾರ್ಟ್ಫೋನ್ನತ್ತ ನಮ್ಮನ್ನು ಸೆಳೆಯುತ್ತವೆ. ಹಾಗಾಗಿ ಅನಗತ್ಯ ನೋಟಿಫಿಕೇಶನ್ಗಳನ್ನು ನಿಷ್ಕ್ರಿಯಗೊಳಿಸಿ ಮತ್ತು ಪ್ರಮುಖವಾದದ್ದಕ್ಕೆ ಮಾತ್ರ ಆದ್ಯತೆ ನೀಡಿ.
ಸ್ಮಾರ್ಟ್ಫೋನ್ ಬಳಕೆ ಸೀಮಿತವಾಗಿರಲಿ
ಸ್ಮಾರ್ಟ್ ಫೋನ್ ಬಳಕೆಗೆ ಲಿಮಿಟ್ ಹಾಕಿಕೊಳ್ಳುವುದು ಉತ್ತಮ. ಊಟದ ಸಮಯಗಳು, ಕುಟುಂಬಸ್ಥರೊಂದಿಗೆ ಕಾಲ ಕಳೆಯುವುದು, ಸಮಾರಂಭಗಳು, ಅಥವಾ ಸಾಮಾಜಿಕ ಕೂಟಗಳು ಇತ್ಯಾದಿಗಳಲ್ಲಿ ಭಾಗಿಯಾದಾಗ ಸ್ಮಾರ್ಟ್ ಫೋನ್ ಬಳಸದೇ ಇರುವುದು ಉತ್ತಮ.
ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ
ದಿನವಿಡೀ ಫೋನ್ ನೋಡುತ್ತ ಕಾಲ ಕಳೆಯುವ ಬದಲು ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಪುಸ್ತಕ ಓದುವುದು, ಕ್ರೀಡೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮ.
ಮಲಗುವ ಮುನ್ನ ಫೋನ್ ಬಳಸಬೇಡಿ
ಸ್ಮಾರ್ಟ್ಫೋನ್ನಿಂದ ಹೊರಬರುವ ನೀಲಿ ಕಿರಣಗಳು ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿಪಡಿಸಬಹುದು. ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಫೋನ್ ಬಳಸುವುದನ್ನು ತಪ್ಪಿಸಿ.
ಧ್ಯಾನ ಮಾಡಿ
ಸ್ಮಾರ್ಟ್ಫೋನ್ ಬಳಕೆಯಿಂದ ಒತ್ತಡ ಮತ್ತು ಆತಂಕದ ಮಟ್ಟವನ್ನು ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಧ್ಯಾನ ಅಥವಾ ಆಳವಾದ ಉಸಿರಾಟದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಹಲವಾರು ಪ್ರಯತ್ನಗಳ ಹೊರತಾಗಿಯೂ ಸ್ಮಾರ್ಟ್ಫೋನ್ ಚಟ ಕಡಿಮೆಯಾಗದೇ ಇದ್ದರೆ ವೃತ್ತಿಪರರ ಸಹಾಯವನ್ನು ಪಡೆಯಿರಿ.