ಇದು ಪಕ್ಕಾ ಪಂಜಾಬಿ ತಿನಿಸು. ಸಾಂಪ್ರದಾಯಿಕ ತಂದೂರ್ ನಲ್ಲಿ ಬೇಯಿಸಿದ್ರೆ ಅದರ ರುಚಿನೇ ಬೇರೆ. ಆದ್ರೆ ನೀವು ದೋಸೆ ಹೆಂಚಿನ ಮೇಲೂ ಇದನ್ನು ಬೇಯಿಸಬಹುದು. ಚೋಲೆ ಮಸಾಲೆ ಅಥವಾ ಚನ್ನಾ ಮಸಾಲಾ ಜೊತೆ ಇದನ್ನು ಸವಿಯಬಹುದು. ಪಂಜಾಬ್ ನ ಅಮೃತಸರದಲ್ಲಿ ಸ್ಪೆಷಲ್ ಆಲೂ ಕುಲ್ಚಾ ಸಿಗುತ್ತದೆ.
ಪಂಜಾಬಿಗಳು ಇದನ್ನು ಬೆಳಗ್ಗೆ ತಿಂಡಿಗೆ ಸೇವಿಸ್ತಾರೆ. ನೀವು ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೂ ಆಲೂ ಕುಲ್ಚಾ ಮಾಡಬಹುದು. ಜೊತೆಗೆ ಉಪ್ಪಿನಕಾಯಿ ಅಥವಾ ರಾಯಿತ ಇದ್ದರೂ ಸಾಕು.
ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, ಒಂದು ಚಮಚ ಸಕ್ಕರೆ, 1 ಚಮಚ ಬೇಕಿಂಗ್ ಪೌಡರ್, ಕಾಲು ಚಮಚದಷ್ಟು ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಕಪ್ ನಷ್ಟು ಮೊಸರು, 2 ಚಮಚ ಎಣ್ಣೆ, ಉಗುರು ಬೆಚ್ಚಗಿನ ನೀರು. ಸ್ಟಫಿಂಗ್ ಗಾಗಿ ಬೇಯಿಸಿ ಸಿಪ್ಪೆ ಸುಲಿದ ಎರಡು ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನಕಾಯಿ, ಅರ್ಧ ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಗರಂ ಮಸಾಲ, ಒಂದು ಇಂಚಿನಷ್ಟು ಹೆಚ್ಚಿದ ಶುಂಠಿ, ಕಾಲು ಚಮಚ ಮಾವಿನಕಾಯಿ ಪುಡಿ, ಕಾಲು ಚಮಚ ಓಮಿನ ಕಾಳು, 2 ಚಮಚದಷ್ಟು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಅಲಂಕಾರಕ್ಕಾಗಿ 2 ಚಮಚ ಕಪ್ಪು ಎಳ್ಳು, ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 2 ಚಮಚ ಬೆಣ್ಣೆ.
ಮಾಡುವ ವಿಧಾನ : ಮೈದಾ, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಮೊಸರು, ಎಣ್ಣೆ, ಉಪ್ಪು ಮತ್ತು ನೀರನ್ನು ಹಾಕಿ ಹಿಟ್ಟು ಕಲೆಸಿಕೊಳ್ಳಿ. ಅದರ ಮೇಲೆ ಒದ್ದೆ ಬಟ್ಟೆಯನ್ನು ಹಾಕಿ 2 ಗಂಟೆಗಳವರೆಗೆ ಹಾಗೇ ಇಡಿ. ಇನ್ನೊಂದು ಬೌಲ್ ನಲ್ಲಿ ಬೇಯಿಸಿ ಸಿಪ್ಪೆ ಸುಲಿದ ಎರಡು ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಒಂದು ಹಸಿ ಮೆಣಸಿನಕಾಯಿ, ಅರ್ಧ ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಗರಂ ಮಸಾಲ, ಒಂದು ಇಂಚಿನಷ್ಟು ಹೆಚ್ಚಿದ ಶುಂಠಿ, ಕಾಲು ಚಮಚ ಮಾವಿನಕಾಯಿ ಪುಡಿ, ಕಾಲು ಚಮಚ ಓಮಿನ ಕಾಳು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
ರೆಡಿ ಮಾಡಿಟ್ಟಿರುವ ಹಿಟ್ಟಿನಲ್ಲಿ ಚೆಂಡಿನ ಗಾತ್ರದ ಉಂಡೆಗಳನ್ನು ಮಾಡಿ. ಕೈಗಳ ಮೇಲಿಟ್ಟುಕೊಂಡು ಉಂಡೆಗಳನ್ನು ತಟ್ಟಿ ಪೂರಿಯಾಕಾರಕ್ಕೆ ಮಾಡಿಕೊಂಡು ಅದರ ಮೇಲೆ ಆಲೂ ಸ್ಟಫ್ ತುಂಬಿಸಿ ಮುಚ್ಚಿ. ಮೇಲಿಂದ ಎಳ್ಳು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಲಟ್ಟಿಸಿ. ಕುಲ್ಚಾದ ಮೇಲೆ ಸ್ವಲ್ಪ ನೀರನ್ನು ಸವರಿ. ಬಿಸಿಯಾದ ತವಾ ಮೇಲೆ ಹಾಕಿ. ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ನಂತರ ಬಿಸಿ ಕುಲ್ಚಾದ ಮೇಲೆ ಬೆಣ್ಣೆ ಸವರಿ ಸರ್ವ್ ಮಾಡಿ.