ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯ ಕನ್ನಡ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. ಪರೀಕ್ಷೆ ಬರೆಯುವ ಅವಧಿಯನ್ನು ಅರ್ಧ ಗಂಟೆಗಳ ಕಾಲ ಹೆಚ್ಚಿಸಲಾಗಿದೆ.
ಈವರೆಗೆ ಪರೀಕ್ಷೆ ಬರೆಯಲು ಒಂದೂವರೆ ಗಂಟೆಗಳ ಕಾಲ ಅವಕಾಶ ಸಿಗುತ್ತಿದ್ದು, ಇನ್ನು ಮುಂದೆ ಎರಡು ಗಂಟೆಗಳ ಕಾಲ ಅವಕಾಶ ಸಿಗಲಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿಕಾಸ್ ಕಿಶೋರ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಡ್ಡಾಯ ಕನ್ನಡ ಪರೀಕ್ಷೆ ಅವಧಿಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಜನವರಿ 21ರಂದು ನಿಗದಿಯಾಗಿದ್ದ ವಿವಿಧ ಗ್ರೂಪ್ ಸಿ ಹುದ್ದೆಗಳು ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜನೆ ಹುದ್ದೆಯ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ನಡೆಸಲಾಗುತ್ತದೆ.