ಕಳೆದ ವರ್ಷ ದೇಶಕ್ಕೆ ಅಪ್ಪಳಿಸಿದ ಕೊರೊನಾ ಮಹಾಮಾರಿಯಿಂದಾಗಿ ಬಹುತೇಕ ಎಲ್ಲ ಚಟುವಟಿಕೆಗಳು ನೆಲಕಚ್ಚಿವೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದ ಕಾರಣ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ಲಾಕ್ ಡೌನ್ ತೆರವುಗೊಂಡಿದ್ದರೂ ಸಹ ಆರ್ಥಿಕ ಪರಿಸ್ಥಿತಿ ಹಳಿಗೆ ಬರುತ್ತಿಲ್ಲ.
ಇದರಿಂದಾಗಿ ಸಾರ್ವಜನಿಕರ ವೈಯಕ್ತಿಕ ಆದಾಯ ಮಾತ್ರವಲ್ಲದೆ ಸರ್ಕಾರದ ಆದಾಯಕ್ಕೂ ಕತ್ತರಿ ಬಿದ್ದಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿದ ಆಸ್ತಿ ಖರೀದಿ ನೋಂದಣಿಯಿಂದಾಗಿ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ಹರಿದು ಬರುತ್ತಿತ್ತು. ಆದರೆ ನೋಂದಣಿ ಮಾರ್ಗಸೂಚಿ ದರ ಹೆಚ್ಚಳದಿಂದಾಗಿ ನೋಂದಣಿ ಪ್ರಮಾಣ ಕುಸಿದಿದೆ. ಬಹಳಷ್ಟು ಮಂದಿ ಜಿಪಿಎ ಪತ್ರಗಳ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಗಮನಕ್ಕೆ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಇದೀಗ ಮನೆ, ನಿವೇಶನ ಖರೀದಿ ಮತ್ತು ಆಸ್ತಿ ವರ್ಗಾವಣೆ ಉತ್ತೇಜಿಸುವ ಸಲುವಾಗಿ ಸ್ಥಿರಾಸ್ತಿ ಮಾರ್ಗಸೂಚಿ ದರ ಕಡಿಮೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಹೀಗಾಗಿ ವರ್ಷಾಂತ್ಯದ ವೇಳೆಗೆ ಸ್ಥಿರಾಸ್ತಿ ಮಾರ್ಗಸೂಚಿ ದರ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ ಹೆದ್ದಾರಿಗಳ ಅಕ್ಕಪಕ್ಕದ ಆಸ್ತಿಗೆ ಇದು ಅನ್ವಯವಾಗುವುದಿಲ್ಲ. ಬದಲಾಗಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.