ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ 32 ವರ್ಷದ ಜಗದೀಶ್ ಬಂಧನಕ್ಕೊಳಗಾದ ಆರೋಪಿಯಾಗಿದ್ದು, ಪದ್ಮಿನಿ ಪ್ರಸಾದ್ ಅವರ ಭಾವಚಿತ್ರ ಹಾಗೂ ಮಾಹಿತಿಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದಿದ್ದ. ಇದನ್ನು ನಿಜವೆಂದು ನಂಬಿದ ಕೆಲವು ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆ ಹೇಳಿಕೊಂಡ ವೇಳೆ ಅವರಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದ.
ಕಿರುಕುಳಕ್ಕೊಳಗಾದ ಕೆಲ ಮಹಿಳೆಯರು ಈ ವಿಷಯವನ್ನು ಡಾ. ಪದ್ಮಿನಿ ಪ್ರಸಾದ್ ಅವರ ಗಮನಕ್ಕೆ ತಂದಿದ್ದು, ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಆರೋಪಿ ಜಗದೀಶನನ್ನು ಬಂಧಿಸಿದ್ದಾರೆ.