ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಸ್ತನಗಳಲ್ಲಿ ನೋವು ಮತ್ತು ಸೆಳೆತ ಸರ್ವೇಸಾಮಾನ್ಯ. ಆದರೆ ಈ ತೊಂದರೆ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ನೀವು ಎಚ್ಚೆತ್ತುಕೊಳ್ಳಬೇಕು. ಆರಂಭದಲ್ಲಿ ಸಣ್ಣಗೆ ಕಾಣಿಸಿಕೊಳ್ಳುವ ಈ ನೋವು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗುವ ಅಪಾಯವಿರುತ್ತದೆ.
ಮುಟ್ಟಿನ ಮೊದಲು ಅಥವಾ ಋತುಚಕ್ರದ ಸಮಯದಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡರೆ ಅದು ಸಹಜ. ಆದರೆ ಇಡೀ ತಿಂಗಳು ಈ ಸಮಸ್ಯೆ ಇದ್ದರೆ ಕೂಡಲೇ ಪರೀಕ್ಷಿಸಿಕೊಳ್ಳುವುದು ಅನಿವಾರ್ಯ. ಮುಟ್ಟಿನ ಸಮಯದಲ್ಲಿ ಹಾರ್ಮೋನ್‌ಗಳು ಏರುಪೇರಾಗುತ್ತವೆ. ಈ ಕಾರಣದಿಂದಾಗಿ ಸ್ತನಗಳಲ್ಲಿ ನೋವಿರುತ್ತದೆ. ಸ್ತನಗಳಲ್ಲಿ ಚುಚ್ಚಿದಂತಹ ಅನುಭವವಾಗುತ್ತದೆ. ಪೀರಿಯಡ್ಸ್ ಬಳಿಕ ಈ ನೋವು ತಂತಾನೇ ಮಾಯವಾಗುತ್ತದೆ.
ಒಮ್ಮೊಮ್ಮೆ ಎದೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ನೋವು ಪ್ರಾರಂಭವಾಗುತ್ತದೆ. ನೀವು ಸಾಕಷ್ಟು ಒತ್ತಡದಲ್ಲಿರುವಾಗ ನೀರಿನ ಧಾರಣವೂ ಸಂಭವಿಸಬಹುದು. ಋತುಚಕ್ರ ಮುಗಿದ ನಂತರ ನಿಂತ ನೀರು ಹೊರಬರುತ್ತದೆ. ಬಳಿಕ ನೋವು ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳುತ್ತದೆ. ಸ್ತನಗಳಲ್ಲಿ ಯಾವುದೇ ರೀತಿಯ ಗಾಯವಾಗಿದ್ದರೆ ಅದರಿಂದಲೂ ನೋವು ಬರುತ್ತದೆ.
ಗರ್ಭಾವಸ್ಥೆಯಲ್ಲಿ, ಮೊದಲ ಮೂರು ತಿಂಗಳುಗಳಲ್ಲಿ ಸ್ತನದಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತದೆ. ಮೊದಲ ಬಾರಿಗೆ ನೀವು ತಾಯಿಯಾಗಿದ್ದು, ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲೂ ಸ್ತನಗಳಲ್ಲಿ ತೀವ್ರವಾದ ನೋವು ಇರುತ್ತದೆ. ಸ್ತನಗಳಲ್ಲಿ ಸೋಂಕು ಕೂಡ ಕೆಲವೊಮ್ಮೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಸ್ತನಗಳ ನೋವು ಮತ್ತು ಸೆಳೆತ ತೀವ್ರವಾಗಿದ್ದರೆ ಅದನ್ನು ನಿರ್ಲಕ್ಷಿಸದೇ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ.