ದಕ್ಷಿಣ ಆಫ್ರಿಕಾದ ಖ್ಯಾತ ಯೂಟ್ಯೂಬರ್ ಬಿಐ ಫಕಾಥಿಯವರು ಸ್ಫೂರ್ತಿದಾಯಕ ವಿಡಿಯೊಗಳಿಂದ, ಸ್ಫಟಿಕದಂತಹ ಮಾತುಗಳಿಂದ ಜನರನ್ನು ಹುರಿದುಂಬಿಸುತ್ತಾರೆ. ಹಾಗಾಗಿ ಅವರು ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಖ್ಯಾತಿ ಹೊಂದಿದ್ದಾರೆ. ಇಂತಹ ಫಕಾಥಿ ಈಗ ಮಾನವೀಯತೆ ಮೆರೆಯುವ ಮೂಲಕ ಜನರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.
ರೂಡಿ ಎಂಬ ಬಾಲಕನು ಹೊಟ್ಟೆ ಪೊರೆಯಲು ಬೀದಿಗಳನ್ನು ಸ್ವಚ್ಛಗೊಳಿಸುತ್ತಾನೆ. ಹೀಗೆ ಕೆಲಸ ಮಾಡಿದ ಬಂದ ಹಣದಲ್ಲಿಯೇ ಕುಟುಂಬ ಸಾಗಿಸಲು ನೆರವಾಗುತ್ತಾನೆ. ಇಂತಹ ರೂಡಿ ಜತೆ ಮಾತನಾಡಿದ ಫಕಾಥಿಯವರು ಕೊನೆಗೆ ಬಾಲಕನಿಗೆ ಕೈತುಂಬ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ವೀಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೀದಿಗಳನ್ನು ಸ್ವಚ್ಛಗೊಳಿಸುವ ಬಾಲಕನು ಬೀದಿ ಬದಿ ಬಿದ್ದಿರುವ ಕ್ಯಾನ್‌ಗಳನ್ನು ಸಂಗ್ರಹಿಸುವುದು, ಕ್ಯಾನ್‌ಗಳಿಗಾಗಿ ಕಸದ ಬುಟ್ಟಿಗಳನ್ನು ಹುಡುಕುವುದು ಹಾಗೂ ಕಾರುಗಳನ್ನು ಸ್ವಚ್ಛಗೊಳಿಸುವುದನ್ನು ಕಂಡ ಫಕಾಥಿ, ’ನೀನೇಕೆ ಹೀಗೆ ಮಾಡುತ್ತೀಯಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ರೂಡಿ, ’ನಾನು ನನ್ನ ತಂದೆ ಜತೆ ವಾಸಿಸುತ್ತೇನೆ. ನಮ್ಮ ಹೊಟ್ಟೆ ತುಂಬಲು ತಂದೆ ದುಡಿದ ಹಣ ಸಾಕಾಗುವುದಿಲ್ಲ. ಹೆಚ್ಚಿನ ಹಣಕ್ಕಾಗಿ ನಾನು ಈ ಕೆಲಸ ಮಾಡುತ್ತೇನೆ’, ಎಂದು ತಿಳಿಸಿದ್ದಾನೆ.
Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್
ಅಲ್ಲದೆ, ಬಾಲಕನ ಆದಾಯವು 50 ಡಾಲರ್‌ಗಿಂತ ಕಡಿಮೆ ಎಂದು ತಿಳಿದ ಫಕಾಥಿ, ಮೊದಲು ಬಾಲಕನಿಗೆ ಒಂದಷ್ಟು ನೋಟುಗಳನ್ನು ಕೊಟ್ಟು ಎಣಿಸಿಕೊ ಎಂದಿದ್ದಾರೆ. ಅವು 350 ಡಾಲರ್ ಆಗುತ್ತವೆ ಎಂದು ಬಾಲಕ ಹೇಳುತ್ತಲೇ ಮತ್ತೊಂದು ನೋಟು ಕಂತೆ ನೀಡಿದ್ದಾರೆ. ಹೀಗೆ ಫಕಾಥಿ ಅವರಿಂದ ನೋಟುಗಳನ್ನು ಪಡೆದ ಬಾಲಕನು ಭಾವುಕನಾಗಿ ಗಳಗಳನೆ ಅತ್ತಿದ್ದಾನೆ. ವಿಡಿಯೊ ಈಗ ವೈರಲ್ ಆಗಿದ್ದು, ಫಕಾಥಿ ಅವರ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.