ಸ್ಲಿಮ್ ಫಿಗರ್ ಮತ್ತು ಆಬ್ಸ್ ಹೊಂದಿರುವ ಕಟ್ಟುಮಸ್ತಾದ ಹುಡುಗರ ಮೇಲೆ ಮಾತ್ರ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂದು ಭಾವಿಸಿದ್ದರೆ ನಿಮ್ಮ ಕಲ್ಪನೆ, ಊಹೆ ತಪ್ಪು. ಜಗತ್ತಿನಲ್ಲಿ ದೊಡ್ಡಹೊಟ್ಟೆ ಹೊಂದಿದ ಕೆಟ್ಟದಾಗಿ ಕಾಣಿಸುವ ವ್ಯಕ್ತಿಯನ್ನು ಮದುವೆಯಾಗಲು ಹುಡುಗಿಯರ ಸಾಲೇ ನಿಂತಿರುತ್ತದೆ. ಬೋಡಿ ಬುಡಕಟ್ಟು ಜನಾಂಗದಲ್ಲಿ ಇಂತಹ ಪದ್ಧತಿ ಗಮನಿಸಬಹುದಾಗಿದೆ.
ಹುಡುಗಿಯರು ಏನು ಇಷ್ಟಪಡುತ್ತಾರೆ ಎಂದು ಯಾರಿಗೂ ಅರ್ಥವಾಗಲ್ಲ. ಹುಡುಗಿಯರ ಇಷ್ಟ ಮತ್ತು ಅನಿಷ್ಟಗಳು ಬದಲಾಗುತ್ತಲೇ ಇರುತ್ತವೆ. ಕೆಲವು ಹುಡುಗಿಯರು ಹಣ ಹೊಂದಿದ ಶ್ರೀಮಂತ ಯುವಕರನ್ನು ಇಷ್ಟಪಟ್ಟರೆ, ಮತ್ತೆ ಕೆಲವರು ನೋಡಲು ಆಕರ್ಷಕವಾಗಿರುವ ಹುಡುಗರನ್ನು ಇಷ್ಟ ಪಡುತ್ತಾರೆ. ಇದನ್ನೇ ನಂಬಿಕೊಂಡ ಹೆಚ್ಚಿನ ಹುಡುಗರು ಜಿಮ್ ನಲ್ಲಿ ಬೆವರು ಹರಿಸುತ್ತಾರೆ.
ಜಿಮ್ ನಲ್ಲಿ ಬೆವರು ಹರಿಸುವ ಅರ್ಧದಷ್ಟು ಹುಡುಗರು, ಹುಡುಗಿಯರನ್ನು ಮೆಚ್ಚಿಸಲು ದೇಹ ದಂಡಿಸುತ್ತಾರೆ. ಹುಡುಗರಿಗೆ ಡೊಳ್ಳುಹೊಟ್ಟೆ ಇದ್ದರೆ ಯಾವುದೇ ಹುಡುಗಿಯೂ ಇಷ್ಟಪಡಲ್ಲ. ಆದರೆ, ಬೋಡಿ ಬುಡಕಟ್ಟು ಜನಾಂಗದಲ್ಲಿ ದೊಡ್ಡಹೊಟ್ಟೆ ಹೊಂದಿದವರನ್ನು ಸುಂದರ ಎಂದು ಪರಿಗಣಿಸಲಾಗುತ್ತದೆ.
ಇಥಿಯೋಪಿಯಾದ ಓಮೋ ಕಣಿವೆಯಲ್ಲಿ ವಾಸಿಸುವ ಬೋಡಿ ಬುಡಕಟ್ಟು ಜನಾಂಗದವರಲ್ಲಿ ಇಂತಹ ಸಂಪ್ರದಾಯ ಬೆಳೆದುಬಂದಿದೆ. ಈ ಬುಡಕಟ್ಟು ಜನಾಂಗದಲ್ಲಿ ಪ್ರತಿವರ್ಷ ಒಂದು ಸ್ಪರ್ಧೆ ನಡೆಯುತ್ತದೆ. ಅದೇನೆಂದರೆ ಕೆಟ್ಟ ಮನುಷ್ಯ ಸ್ಪರ್ಧೆ. ಅತ್ಯಂತ ಕೆಟ್ಟ ಮನುಷ್ಯನ ಸ್ಪರ್ಧೆಯಲ್ಲಿ ಗೆದ್ದವರಿಗೆ ಅತ್ಯಂತ ಸುಂದರ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಆತನನ್ನು ಮದುವೆಯಾಗಲು ಹುಡುಗಿಯರ ನಡುವೆ ಪೈಪೋಟಿಯೇ ನಡೆಯುತ್ತದೆ. ಈ ಸ್ಪರ್ಧೆಯನ್ನು ಗೆಲ್ಲಲು ಬುಡಕಟ್ಟು ಜನಾಂಗದ ಪುರುಷರು ಆರು ತಿಂಗಳಿಗೆ ಮೊದಲೇ ತಯಾರಿಯನ್ನು ಆರಂಭಿಸುತ್ತಾರೆ. ಹೊಟ್ಟೆ ಬೆಳೆಸಲು ಎಲ್ಲಾ ತಯಾರಿ ಮಾಡಿಕೊಂಡು ಪ್ರಯತ್ನ ನಡೆಸುತ್ತಾರೆ.
ಆರು ತಿಂಗಳಿನಿಂದ ಸಿದ್ಧತೆ
ಬೋಡಿ ಬುಡಕಟ್ಟಿನ ಅತ್ಯಂತ ಕೆಟ್ಟ ವ್ಯಕ್ತಿಯಾಗಲು ತಯಾರಿ ನಡೆಸುವುದು ತುಂಬಾ ಕಷ್ಟವಾಗಿರುತ್ತದೆ. ಇದಕ್ಕಾಗಿ ಆರು ತಿಂಗಳ ಹಿಂದಿನಿಂದ ಅನೇಕ ಕ್ರಮಗಳನ್ನು ಅನುಸರಿಸುತ್ತಾರೆ. ಹಸುವಿನ ರಕ್ತ, ಹಾಲು ಕುಡಿಯುವುದನ್ನು ರೂಢಿಸಿಕೊಳ್ಳುತ್ತಾರೆ. ಇದರಿಂದ ಹೊಟ್ಟೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಎಂದು ನಂಬಲಾಗಿದೆ. ಸ್ಪರ್ಧೆಯ ಆರು ತಿಂಗಳ ಮೊದಲು ಪುರುಷರು ಪ್ರತ್ಯೇಕ ಗುಡಿಸಲುಗಳಲ್ಲಿ ವಾಸವಾಗಿರುತ್ತಾರೆ. ಈ ಸಮಯದಲ್ಲಿ ಅವರು ಲೈಂಗಿಕ ಸಂಬಂಧ ಹೊಂದಲು ಅವಕಾಶ ಇರುವುದಿಲ್ಲ. ಹಸುವಿನ ರಕ್ತ, ಹಾಲನ್ನು ಮಾತ್ರ ಕುಡಿಯುವ ಮೂಲಕ ಜೀವನ ಸಾಗಿಸುತ್ತಾರೆ.
ಮಹಿಳೆಯರನ್ನು ಪಡೆಯುವ ಸ್ಪರ್ಧೆಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ
ಹುಡುಗಿಯನ್ನು ಪಡೆಯುವ ಮತ್ತು ಅವರನ್ನು ಆಕರ್ಷಿಸುವ ಧಾವಂತದಲ್ಲಿ ಕೆಲವು ಪುರುಷರು ರಕ್ತದೊಂದಿಗೆ ಬೆರೆಸಿದ ಹಾಲನ್ನು ಕುಡಿಯುತ್ತಾರೆ. ಇದರಿಂದ ಕೆಲವೊಮ್ಮೆ ಅಪಾಯಕಾರಿ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಈ ಜನರು ಯಾವುದೇ ಭೀತಿಯಿಲ್ಲದೆ ರಕ್ತದೊಂದಿಗೆ ಬೆರೆಸಿದ ಹಾಲನ್ನು ಕುಡಿಯುತ್ತಾರೆ. ಆರು ತಿಂಗಳು ಗುಡಿಸಲಿನಲ್ಲೇ ಕಳೆದ ನಂತರ ಸ್ಪರ್ಧೆಯ ದಿನದಂದು ತಮ್ಮ ಭಾರವಾದ ಹೊಟ್ಟೆ ಹೊತ್ತುಕೊಂಡು ಸ್ಪರ್ಧೆಗೆ ಬರುತ್ತಾರೆ. ಯಾರು ಹೆಚ್ಚು ದಪ್ಪನಾಗಿರುತ್ತಾನೋ ಅವನು ಸುಂದರ ಎಂದು ಪರಿಗಣಿಸಲಾಗುತ್ತದೆ. ನಂತರ ಗ್ರಾಮಸ್ಥರು ಅತ್ಯಂತ ಕೆಟ್ಟ ವ್ಯಕ್ತಿಗೆ ನಾಯಕ ಎಂಬ ಬಿರುದು ನೀಡುತ್ತಾರೆ.
ಕಲೆ ಹೊಂದಿದ ಹುಡುಗಿಯರೇ ಸೌಂದರ್ಯವತಿಯರು
ಬಾಡಿ ಟ್ರೈಬ್ನಲ್ಲಿ ಸೌಂದರ್ಯ ವಿಭಿನ್ನ ಅರ್ಥಗಳನ್ನು ಹೊಂದಿದೆ. ಇವರಲ್ಲಿ ಸ್ಥೂಲಕಾಯತೆಯು ಪುರುಷರನ್ನು ಸುಂದರವಾಗಿಸುತ್ತದೆ. ಅಂದ ಹಾಗೆ, ಈ ಬುಡಕಟ್ಟು ಸಮುದಾಯದ ಹುಡುಗಿಯರ ದೇಹದ ಮೇಲೆ ಹೆಚ್ಚು ಹಚ್ಚೆ ಗುರುತುಗಳನ್ನು ಸುಂದರವೆಂದು ಪರಿಗಣಿಸಲಾಗುತ್ತದೆ. ಚಾಕು ಅಥವಾ ಬ್ಲೇಡ್ ಗಳಿಂದ ಹುಡುಗಿಯರ ದೇಹಗಳನ್ನು ಕತ್ತರಿಸಿದ ಗುರುತು ಮಾಡಲಾಗುತ್ತದೆ. ಅಂತ ಹುಡುಗಿಯರನ್ನು ಪುರುಷರು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.