ಚರ್ಮದ ಮೇಲೆ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್ ಸೌಂದರ್ಯವನ್ನು ಹಾಳು ಮಾಡುತ್ತದೆ. ಸ್ಟೆಚ್ ಮಾರ್ಕ್ ಮಹಿಳೆಯರನ್ನು ಚಿಂತೆಗೀಡು ಮಾಡುತ್ತದೆ. ಗರ್ಭ ಧರಿಸಿದ ವೇಳೆ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿದ್ರೆ ದಿಢೀರ್ ತೂಕ ಏರುವುದು ಅಥವಾ ಇಳಿಸುವುದು, ಅನುವಂಶಿಕತೆ, ಒತ್ತಡ ಮತ್ತು ದೈಹಿಕ ಸ್ಥಿತಿಯಲ್ಲಿ ಬದಲಾವಣೆ ಈವೆಲ್ಲವೂ ಸ್ಟ್ರೆಚ್ ಮಾರ್ಕ್ಸ್ ಗೆ ಕಾರಣವಾಗುತ್ತದೆ.
ಸ್ಟ್ರೆಚ್ ಮಾರ್ಕ್ಸ್ ಸುಲಭವಾಗಿ ಕಡಿಮೆ ಮಾಡಬಹುದು. ಕೆಲ ನೈಸರ್ಗಿಕ ವಸ್ತುಗಳು ಸ್ಟ್ರೆಚ್ ಮಾರ್ಕ್ಸ್ ಇಲ್ಲದಂತೆ ಮಾಡುತ್ತದೆ. ಬಹು ಮುಖ್ಯವಾಗಿ ವ್ಯಾಯಾಮ ಅತಿ ಅಗತ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುತ್ತದೆ. ಉಠ್ ಬೈಸ್ ತೆಗೆಯುವುದರಿಂದಲೂ ಸ್ಟ್ರೆಚ್ ಮಾರ್ಕ್ಸ್ ದೂರವಾಗುತ್ತದೆ.
ಹರಳೆಣ್ಣೆ : ಹರಳೆಣ್ಣೆ ಅನೇಕ ಚರ್ಮ ರೋಗಗಳಿಗೆ ಔಷಧಿ. ಸುಕ್ಕುಗಟ್ಟುವುದು, ಕಪ್ಪು ಕಲೆ, ಗುಳ್ಳೆಗಳು ಹೀಗೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳಿಂದ ಹರಳೆಣ್ಣೆ ಬಿಡುಗಡೆ ನೀಡುತ್ತದೆ. ಸ್ಟ್ರೆಚ್ ಮಾರ್ಕ್ಸ್ ಗೂ ಹರಳೆಣ್ಣೆ ಒಳ್ಳೆಯದು. ಸ್ಟ್ರೆಚ್ ಮಾರ್ಕ್ಸ್ ಮೇಲೆ ಹರಳೆಣ್ಣೆಯನ್ನು ಹಚ್ಚಿ. 5-10 ನಿಮಿಷ ಮಸಾಜ್ ಮಾಡಿ. ಹತ್ತಿ ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ಅರ್ಧ ಗಂಟೆಗಳ ಕಾಲ ಬಿಸಿ ನೀರಿನ ಬಾಟಲಿಯಿಂದ ಸ್ಕ್ರಬ್ ಮಾಡಿ. ಪ್ರತಿ ದಿನ ಒಂದು ತಿಂಗಳುಗಳ ಕಾಲ ಮಾಡಿ, ಧನಾತ್ಮಕ ಫಲಿತಾಂಶ ಪಡೆಯಿರಿ.
ಅಲೋವೇರಾ : ಇದು ಕೂಡ ಅನೇಕ ಚರ್ಮ ರೋಗಗಳಿಗೆ ರಾಮಬಾಣ. ಅಲೋವೆರಾವನ್ನು ತೆಗೆದುಕೊಂಡು ನೇರವಾಗಿ ನಿಮ್ಮ ಸ್ಟ್ರೆಚ್ ಮಾರ್ಕ್ಸ್ ಜಾಗಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್ ನಿಂದ ಮುಕ್ತಿ ಪಡೆಯಬಹುದು.
ನಿಂಬೆ ರಸ : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ನಿಂಬೆ ಹಣ್ಣು ಇದ್ದೇ ಇರುತ್ತದೆ. ನೈಸರ್ಗಿಕವಾಗಿ ಆಮ್ಲೀಯ ಗುಣ ಹೊಂದಿರುವ ಇದು ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ. ನಿಂಬೆ ರಸವನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ವೃತ್ತಾಕಾರವಾಗಿ ಉಜ್ಜಿ. 10 ನಿಮಿಷ ಬಿಟ್ಟು ಬಿಸಿನೀರಿನಲ್ಲಿ ತೊಳೆಯಿರಿ. ಸೌತೆಕಾಯಿ ರಸದೊಂದಿಗೆ ನಿಂಬೆ ರಸ ಸೇರಿಸಿ ಕೂಡ ಮಸಾಜ್ ಮಾಡಬಹುದು.
ಸಕ್ಕರೆ : ಸಕ್ಕರೆ ಕೂಡ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ನೆರವಾಗುತ್ತದೆ. ಸ್ವಲ್ಪ ಸಕ್ಕರೆಗೆ ಬಾದಾಮಿ ತೈಲ ಹಾಗೂ ನಿಂಬೆ ರಸವನ್ನು ಸೇರಿಸಿ, ಮಸಾಜ್ ಮಾಡಿ. 15 ನಿಮಿಷ ಬಿಟ್ಟು ಸ್ನಾನ ಮಾಡಿ. ಪ್ರತಿದಿನ ಹೀಗೆ ಮಾಡಿ, ತಿಂಗಳೊಳಗೆ ಪರಿಣಾಮ ಗೊತ್ತಾಗುತ್ತದೆ.
ಆಲೂಗಡ್ಡೆ : ಆಲೂಗಡ್ಡೆಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ, 5 ನಿಮಿಷ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ.