ಇದು ಜಾಲತಾಣಗಳ ದುನಿಯಾ. ಈಗಂತೂ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಚೀನಾವನ್ನು ಬಿಟ್ರೆ ಅತಿ ಹೆಚ್ಚು ಡೇಟಾ ಬಳಕೆಯನ್ನು ಹೊಂದಿರುವ ದೇಶ ಭಾರತ. ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುತ್ತಾರೆ.
ಇದರಿಂದಾಗಿ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಜನರಲ್ಲಿ ಹೆಚ್ಚಾಗಲು ಪ್ರಾರಂಭಿಸಿವೆ. ಸಾಮಾಜಿಕ ಮಾಧ್ಯಮಗಳ ಹೆಚ್ಚುತ್ತಿರುವ ಬಳಕೆಯನ್ನು ಗಮನದಲ್ಲಿರಿಸಿಕೊಂಡು ಇಂಗ್ಲೆಂಡ್‌ನಲ್ಲಿ ಸಂಶೋಧನೆಯೊಂದನ್ನು ನಡೆಸಲಾಗಿದೆ. ಇದರಲ್ಲಿ ಡಿಜಿಟಲ್ ಡಿಟಾಕ್ಸ್ ಕುರಿತು ಹಲವು ವಿಷಯಗಳು ಬೆಳಕಿಗೆ ಬಂದಿವೆ.
ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಿ: ಕೇವಲ ಒಂದು ವಾರ ಸೋಶಿಯಲ್ ಮೀಡಿಯಾದಿಂದ ವಿರಾಮ ತೆಗೆದುಕೊಂಡರೆ ಖಿನ್ನತೆ ಮತ್ತು ಆತಂಕ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ. ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವುದನ್ನು ಸೋಶಿಯಲ್ ಡಿಟಾಕ್ಸ್ ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ಜನರ ಮನಃಸ್ಥಿತಿ ಚೆನ್ನಾಗಿರುತ್ತದೆ ಮತ್ತು ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ.
18 ರಿಂದ 72 ವರ್ಷ ವಯಸ್ಸಿನ 154 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇವರನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಒಂದು ಗುಂಪು ಪ್ರತಿದಿನ ಸಾಮಾಜಿಕ ಮಾಧ್ಯಮವನ್ನು ಬಳಸ್ತಾ ಇದ್ರೆ ಇನ್ನೊಂದು ಗುಂಪು ಜಾಲತಾಣದಿಂದ ದೂರವಿತ್ತು. ಒಂದು ವಾರದಲ್ಲಿ ಒಂದು ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಸರಾಸರಿ 8 ಗಂಟೆಗಳ ಕಾಲ ಸಮಯ ಕಳೆದಿದೆ. ಅವರನ್ನು ಪರೀಕ್ಷಿಸಿದಾಗ ಕಂಡು ಬಂದ ಸಂಗತಿ ಏನೆಂದರೆ, ಸಾಮಾಜಿಕ ಮಾಧ್ಯಮವನ್ನು ಬಳಸದೆ ಇರುವವರ ಯೋಗಕ್ಷೇಮ ಪ್ರಮಾಣ 46 ರಿಂದ 55.93ಕ್ಕೆ ಏರಿತ್ತು. ಖಿನ್ನತೆಯ ಮಟ್ಟ 7.46 ರಿಂದ 4.84 ಕ್ಕೆ ಇಳಿದಿತ್ತು. ಆತಂಕದ ಮಟ್ಟ ಕೂಡ 6.92 ರಿಂದ 5.94 ಕ್ಕೆ ಬಂದು ತಲುಪಿತ್ತು.
ಸಾಮಾಜಿಕ ಮಾಧ್ಯಮ ಬಳಸ್ತಾರೆ ಶೇ.71ರಷ್ಟು ಜನರು: ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 467 ಮಿಲಿಯನ್ ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. ಬ್ರಿಟನ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ 71 ಪ್ರತಿಶತಕ್ಕೆ ಏರಿದೆ. ಸಾಮಾಜಿಕ ಮಾಧ್ಯಮವನ್ನು ಬಳಸುವ 97 ಪ್ರತಿಶತ ಜನರು 16 ರಿಂದ 44 ವರ್ಷ ವಯಸ್ಸಿನವರು. ಮನಸ್ಸಿನ ನೆಮ್ಮದಿ ಹಾಗೂ ಶಾಂತಿಗಾಗಿ ಆಗಾಗ ಸೋಶಿಯಲ್ ಮೀಡಿಯಾಗಳಿಂದ ಬ್ರೇಕ್ ತೆಗೆದುಕೊಂಡು ಸೋಶಿಯಲ್ ಡಿಟಾಕ್ಸ್ ಮಾಡಿಕೊಳ್ಳುವುದು ಉತ್ತಮ.