ಕೇರಳದ ಮಲಂಪುಳದ ಕುರುಂಪಾಚಿ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆಂದು ತೆರಳಿದ್ದ ಯುವಕ ಭಾನುವಾರದಂದು ಅಲ್ಲಿಯೇ ಸಿಲುಕಿಕೊಂಡಿದ್ದರು. ಮೂರು ದಿನಗಳ ಕಾರ್ಯಾಚರಣೆಯ ಬಳಿಕ ಬೆಟ್ಟದ ತುದಿಯಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು ಯಶಸ್ವಿಯಾಗಿತ್ತು.
23 ವರ್ಷದ ಚೆರಟ್ಟಿಲ್ ಬಾಬು ಎಂಬಾತ ಭಾನುವಾರದಂದು ಸ್ನೇಹಿತರ ಜೊತೆ ಟ್ರೆಕ್ಕಿಂಗ್ಗೆಂದು ತೆರಳಿ ಅಲ್ಲಿ ಸಿಲುಕಿಕೊಂಡಿದ್ದರು. ಎನ್ಡಿಆರ್ಎಫ್ನ ಸಿಬ್ಬಂದಿಯೊಬ್ಬರು ಬಾಬು ಇರುವ ಸ್ಥಳಕ್ಕೆ ತಲುಪಿ ನೀರಿನ ಬಾಟಲಿ ನೀಡುವವರೆಗೂ ಅವರು ಬರೋಬ್ಬರಿ 43 ಗಂಟೆಗಳ ಕಾಲ ಆಹಾರ, ನೀರು ಇಲ್ಲದೇ ಕಾಲ ಕಳೆದಿದ್ದಾರೆ.
ಇದಾದ ಕೂಡಲೇ ಯುವಕನನ್ನು ಸುರಕ್ಷಿತವಾಗಿ ಬೆಟ್ಟದ ಕಡಿದಾದ ಅಂಚುಗಳಿಂದ ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ಬೆಟ್ಟದ ತಪ್ಪಲಿನಲ್ಲಿ ಬಾಬುಗೆ ವೈದ್ಯಕೀಯ ತಪಾಸಣೆಯನ್ನು ನಡೆಸಿ ಬಳಿಕ ಅವರನ್ನು ಪಲಕ್ಕಾಡ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವರದಿಗಳ ಪ್ರಕಾರ ಮಂಗಳವಾರದಂದು ಬೆಂಗಳೂರಿನಿಂದ ರಕ್ಷಣಾ ತಂಡವನ್ನು ಕರೆಯಿಸಲಾಗಿತ್ತು ಎನ್ನಲಾಗಿದೆ.
ಇದೀಗ ಬಾಬುವನ್ನು ಭಾರತೀಯ ಸೇನೆಯು ರಕ್ಷಿಸುತ್ತಿರುವ ಡ್ರೋನ್ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಾವಳಿಗಳನ್ನು ಫೋಟೋಗ್ರಾಫರ್ ಹಾಗೂ ಡ್ರೋನ್ ಸರ್ವೀಸ್ ಆಪರೇಟರ್ ಸೂರಜ್ ಪಿ ನಾಥ್ ಎಂಬವರು ಸೆರೆ ಹಿಡಿದಿದ್ದಾರೆ. ರಕ್ಷಣಾ ತಂಡಕ್ಕೆ ಮಾರ್ಗದರ್ಶನ ನೀಡುವ ಸಲುವಾಗಿ ಸೂರಜ್ ಕೂಡ ಈ ತಂಡವನ್ನು ಸೇರಿಕೊಂಡಿದ್ದರು. ಈ ವಿಡಿಯೋ ಕೇವಲ 24 ಗಂಟೆಗಳಲ್ಲಿ 1.14 ಲಕ್ಷ ಲೈಕ್ಸ್ ಸಂಪಾದಿಸಿದೆ.
https://youtu.be/Rr2m0yTPH-I