ರಾಯಚೂರು: ಸರ್ಕಾರಿ ಶಾಲೆಗಳ ದುರಾವಸ್ಥೆ ಒಂದೆರೆಡಲ್ಲ, ಅದರಲ್ಲಿಯೂ ಮಳೆಗಾಲ ಬಂತೆಂದರೆ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆ, ಶಾಲೆಯ ಮಕ್ಕಳ ಸ್ಥಿತಿಯಂತೂ ಶೋಚನೀಯವಾಗಿರುತ್ತದೆ. ಶಾಲಾ ಕೊಠಡಿಗಳ ಮೇಲ್ಛಾವಣಿಯಿಂದಲೇ ಮಳೆ ನೀರು ಸುರಿಯುತ್ತಿದ್ದರೆ ಒಂದೆಡೆ ಶಿಕ್ಷಕರು ನಿಂತು ಪಾಠ ಮಾಡುತ್ತಿರುತ್ತಾರೆ. ಮತ್ತೊಂದೆಡೆ ವಿದ್ಯಾರ್ಥಿಗಳು ಮಳೆ ನೀರಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ….
ಇದೀಗ ರಾಜ್ಯದ ಸರ್ಕಾರಿ ಶಾಲೆಯೊಂದರ ದುಸ್ಥಿತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಯಚೂರು ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಆದರೂ ದುರಸ್ಥಿ ಕೆಲಸ ಕೈಗೊಂಡಿಲ್ಲ. ಭಾರಿ ಮಳೆಯಿಂದಾಗಿ ಮಳೆ ನೀರೆಲ್ಲ ಶಾಲಾ ಕೊಠಡಿಯೊಳಗೆ, ಬಿಸಿಯೂಟ ತಯಾರಿಸುವ ಅಡುಗೆ ಮನೆಯೊಳಗೆ ಬೀಳುತ್ತಿದೆ.
ಶಿಥಿಲಗೊಂಡಿರುವ ಸರ್ಕಾರಿ ಶಾಲೆ ಸೋರುತ್ತಿದೆ. ಮಳೆಯ ನೀರು ಕೊಠಡಿಯೊಳಗೆ ನುಗ್ಗಿದ್ದು, ಸೋರುವ ಕೋಣೆಯಲ್ಲಿಯೇ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲಾಗುತ್ತಿದೆ. 200 ವಿದ್ಯಾರ್ಥಿಗಳು ಇರುವ ಈ ಶಾಲೆಯ ಅವ್ಯವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಬಿಸಿಯೂಟ ತಯಾರಕರು ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕಾದ ಸ್ಥಿತಿಗೆ ಜನರು ಕಿಡಿ ಕಾರುತ್ತಿದ್ದಾರೆ.