ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ ಇರಲಿ. ಯಾವುದೇ ಸಂಕಷ್ಟಕ್ಕೆ ಒಳಗಾದವರಿಗೆ ನೆರವಿನ ಹಸ್ತವನ್ನು ಚಾಚುತ್ತಲೇ ಬಂದಿದ್ದಾರೆ ಸೋನು ಸೂದ್.
ಇದೀಗ ಸೂದ್ ಮತ್ತೊಮ್ಮೆ ಮಾನವೀಯತೆಯನ್ನು ಮೆರೆದಿದ್ದಾರೆ. ಚಾಹುಮುಖಿ ಎಂಬ ಪುಟ್ಟ ಬಾಲಕಿ ಹುಟ್ಟುತ್ತಲೇ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳನ್ನು ಹೊಂದಿದ್ದಳು. ಇದರಿಂದ ಆಕೆಗೆ ಸಾಮಾನ್ಯ ಮಕ್ಕಳಂತೆ ಇರಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕೈಕಾಲುಗಳನ್ನು ತೆಗೆದುಹಾಕಲು ದುಬಾರಿ ಮೊತ್ತದ ಸರ್ಜರಿ ಮಾಡುವ ಅಗತ್ಯವಿತ್ತು. ಆದರೆ, ಈ ದುಬಾರಿ ಮೊತ್ತದ ಹಣವನ್ನು ಭರಿಸಲು ಪೋಷಕರಿಗೆ ಸಾಧ್ಯವಾಗುತ್ತಿರಲಿಲ್ಲ.
ಈ ಬಗ್ಗೆ ಮಾಹಿತಿ ಪಡೆದ ಸೋನು ಸೂದ್ ಅವರು ಬಾಲಕಿಯ ಸರ್ಜರಿಗೆ ಧನ ಸಹಾಯ ಮಾಡುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ.
ಬಿಹಾರದ ಗ್ರಾಮವೊಂದರ ಈ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸೋನು ಸೂದ್, ಚಾಹುಮುಖಿ ನಾಲ್ಕು ಕಾಲು ಮತ್ತು ನಾಲ್ಕು ಕೈಗಳೊಂದಿಗೆ ಜನ್ಮ ತಾಳಿದ್ದಳು. ಇದೀಗ ಸರ್ಜರಿ ನಂತರ ಈಕೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸೋನು ಸೂದ್ ಅವರ ಈ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿರುವ ನೆಟ್ಟಿಗರು, ಸೋನು ಸೂದ್ ಭೂಮಿಯ ಮೇಲಿರುವ ಒಬ್ಬ ಅತ್ಯುತ್ತಮ ಮನುಷ್ಯ ಎಂದು ತಾರೀಫ್ ಮಾಡಿದ್ದಾರೆ.