ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸೋಂಕು ಕಡಿಮೆಯಾದರಷ್ಟೇ ಲಾಕ್ ಡೌನ್ ತೆರವು ಮಾಡಬೇಕು. ಪಾಸಿಟಿವಿಟಿ ರೇಟ್ ಶೇ.5 ಕ್ಕಿಂತ ಕಡಿಮೆ ಬಂದರೆ ಲಾಕ್ ಡೌನ್ ತೆರವಿಗೆ ತಾಂತ್ರಿಕ ಸಮಿತಿ ಸೂಚಿಸಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಂಕಿತರ ಸಂಖ್ಯೆ 5000ಕ್ಕಿಂತ ಕಡಿಮೆ ಬಂದರೆ ಅನ್ ಲಾಕ್ ಮಾಡಲಾಗುತ್ತದೆ. ನಮ್ಮ ಅಭಿಪ್ರಾಯ ಹಾಗೂ ಜನಹಿತದ ಅಭಿಪ್ರಾಯಗಳನ್ನು ಸಿಎಂ ಅವರಿಗೆ ತಿಳಿಸಿದ್ದೇವೆ. ಅಂತಿಮ ನಿರ್ಧಾರವನ್ನು ಅವರೇ ಕೈಗೊಳ್ಳುತ್ತಾರೆ ಹೊರತು ನಾವ್ಯಾರೂ ಲಾಕ್ ಡೌನ್ ಬಗ್ಗೆ ನಿರ್ಧರಿಸಲಾಗಲ್ಲ ಎಂದರು.
ಇನ್ನು ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದಿಂದ 1300 ವಯಲ್ಸ್ ಔಷಧ ತರಿಸಲಾಗಿದೆ. ಆದರೆ ಇದು ಚಿಕಿತ್ಸೆಗೆ ಸಾಕಾಗುವುದಿಲ್ಲ. ಹಾಗಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜೊತೆ ನಿರಂತರ ಮಾತುಕತೆ ನಡೆಸಿದ್ದೇನೆ ಅವರು ಕೂಡ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ತರಿಸುವ ಯತ್ನದಲ್ಲಿದ್ದಾರೆ. ಕೊರೊನಾ ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.
ಇದೇ ವೇಳೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕೂಡ ಲಾಕ್ ಡೌನ್ ವಿಸ್ತರಣೆ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ತಗ್ಗಿದೆ. ಹೀಗಾಗಿ ಈಗಲೇ ಅನ್ ಲಾಕ್ ಸೂಕ್ತವಲ್ಲ. ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಬರಬೇಕು ಆಗ ಮಾತ್ರ ಹಂತ ಹಂತವಾಗಿ ಅನ್ ಲಾಕ್ ಮಾಡಬಹುದು ಎಂದಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.