
ಇಲಾಖೆಯ ಮಾಹಿತಿಯಂತೆ, ಕಳೆದ ಹತ್ತು ದಿನಗಳಿಂದ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಕೇವಲ ಹತ್ತು ದಿನದಲ್ಲಿ, ಅಂದರೆ ಜನವರಿ 22 ರಿಂದ 31 ನೇ ತಾರೀಖಿನ ತನಕ ಒಟ್ಟು 461 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅದರಲ್ಲಿ, 39 ಮಂದಿ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿರುವುದು ಕಳವಳಕಾರಿಯಾಗಿದೆ.
39 ಸಾವಿನ ಪೈಕಿ, 32 ಮಂದಿ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ಇನ್ನುಳಿದ 7 ಮಂದಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅಂದರೆ, ನೂರು ಕೊರೋನಾ ಸಾವಿನ ಪೈಕಿ 8 ಮಂದಿ ಮನೆಯಲ್ಲೇ ಸಾವಿಗೀಡಾಗುತ್ತಿದ್ದಾರೆ. ಈ ಅಂಕಿಅಂಶಗಳನ್ನ ನೋಡಿದ ಮೇಲೆಯಾದರು, ಮನೆಯಲ್ಲೇ ಸಾವಿಗೀಡಾಗುವುದನ್ನ ತಪ್ಪಿಸುವ ಕೆಲಸ ಮಾಡಬೇಕಿದೆ. ಜನರಲ್ಲಿ ಕೊರೋನಾದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ.
ಮನೆಯಲ್ಲೇ ಆಗ್ತಿರುವ ಸಾವುಗಳಿಗೆ ಕಾರಣ ಏನು..?
ಕಳೆದ ಹತ್ತು ದಿನದಲ್ಲಿ 39 ಮಂದಿ ಚಿಕಿತ್ಸೆಗೆ ಮುನ್ನವೇ ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಸಾವುಗಳಲ್ಲಿ ಹೆಚ್ಚಾಗಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಬಹುತೇಕ ವಯಸ್ಸಾದವರು, ಇತರೆ ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ಸಾವಿಗೀಡಾಗುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸದೆ, ಕೊರೋನಾ ರೋಗ ಲಕ್ಷಣಗಳು ಇದ್ದರೂ ಕೋವಿಡ್ ಟೆಸ್ಟ್ ಗೆ ಮುಂದಾಗದೇ ಇರುವುದು ಸಾವಿನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.