
ಪ್ರತಿದಿನ ಸಮತೋಲನದ ಆಹಾರ ಸೇವಿಸುವುದು ಪ್ರಮುಖವಾದ ಸಂಗತಿಗಳಲ್ಲಿ ಒಂದು. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಸೇವಿಸದೆ ಹೋದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ.
ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಕೊಬ್ಬಿನಂಶಗಳು ಕಡಿಮೆಯಾಗುತ್ತಿದ್ದಂತೆ ವಿಟಮಿನ್ ಎ ಕಡಿಮೆಯಾಗುತ್ತದೆ. ಇದರಿಂದ ದೃಷ್ಟಿ ಕುಂದುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳು ಬಹುಬೇಗ ಅಂಟುವಂತಾಗುತ್ತದೆ. ದೈನಂದಿನ ಆಹಾರದಲ್ಲಿ ವಿಟಮಿನ್ ಸೇವಿಸುವುದರಿಂದ ನೀವು ಈ ಸಮಸ್ಯೆಗಳಿಂದ ದೂರವಿರಬಹುದು.
ಕಿತ್ತಳೆ ಅಥವಾ ಕೆಂಪು ಬಣ್ಣದ ಹಣ್ಣುಗಳಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ. ಅಂದರೆ ಹಸಿರು ಸೊಪ್ಪು ತರಕಾರಿ, ಕ್ಯಾರೆಟ್, ಟೊಮೆಟೊ ಮತ್ತು ಸಿಹಿ ಅಲೂಗಡ್ಡೆಗಳಲ್ಲಿ ಇದು ಸಾಕಷ್ಟಿದೆ. ಭಾರತದಲ್ಲಿ ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ.
ವಿಟಮಿನ್ ಎ ಕಡಿಮೆಯಾದಂತೆ ನಿರಂತರ ಚರ್ಮದ ಸೋಂಕು, ಮೊಡವೆ, ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೆತ್ತಿನ ಚರ್ಮ ಒಣಗುತ್ತದೆ. ಗಂಟಲು ಸೋಂಕು ಅಥವಾ ಬಾಯಿಹುಣ್ಣು ನಿಮ್ಮನ್ನು ಕಾಡುತ್ತದೆ. ತಲೆಹೊಟ್ಟು, ಒಣಕೂದಲು ಸಮಸ್ಯೆಯೂ ಕಿರಿಕಿರಿ ಮಾಡುತ್ತದೆ. ಮೇಲೆ ಹೇಳಿದ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಮೂಳೆಗಳು ಮತ್ತಿತರ ಸೋಂಕುಗಳ ವಿರುದ್ಧ ಹೋರಾಡಲು ಬಲವಾದ ಪ್ರತಿರೋಧ ಶಕ್ತಿಯೊಂದು ನಿರ್ಮಾಣವಾಗುತ್ತದೆ.