ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾದ ಕಾರಣ ಸೊರಗಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಮತ್ತೆ ಜೀವ ಕಳೆ ಬಂದಿದೆ. ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ರಜಾ ದಿನವಾದ ಭಾನುವಾರದಂದು ಜನಸಾಗರವೇ ಹರಿದು ಬಂದಿದೆ.
ಭಾನುವಾರ ಬೆಳಗಿನಿಂದಲೇ ಪ್ರವಾಸಿಗರು ಜೋಗದತ್ತ ಹರಿದು ಬಂದಿದ್ದು, ಮಧ್ಯಾಹ್ನದ ವೇಳೆಗೆ ಕಿಕ್ಕಿರಿದು ತುಂಬಿದ್ದರು. ಅಂದಾಜು 6 ರಿಂದ 7 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಹೇಳಲಾಗಿದ್ದು, ವಾಹನಗಳ ಸಾಲು ಎಲ್ಲೆಡೆ ಕಂಡು ಬರುತ್ತಿತ್ತು. ಕೊಂಚಕಾಲ ಮಳೆ ಸಹ ಬಿಡುವು ನೀಡಿದ್ದ ಕಾರಣ ಜಲಪಾತದ ವೈಭವವನ್ನು ಪ್ರವಾಸಿಗರು ಆನಂದಿಸಿದ್ದಾರೆ.
ಧುಮ್ಮಿಕ್ಕುತ್ತಿರುವ ಜಲಪಾತದ ಮುಂದೆ ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ತೊಡಗಿದ್ದು, ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ವಾಹನ ನಿಲುಗಡೆಯನ್ನು ವ್ಯವಸ್ಥಿತವಾಗಿ ಮಾಡಿದ್ದು, ಹೆಚ್ಚಿನ ದಟ್ಟಣೆ ಉಂಟಾಗಿರಲಿಲ್ಲ.