ಮನೆಯ ಹಿತ್ತಲಲ್ಲಿ ಬೆಳೆಯುವ ಕರಿಬೇವು ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಅದರಿಂದ ಆರೋಗ್ಯದ ಪ್ರಯೋಜನಗಳೂ ಹಲವಾರಿವೆ.
ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬಿಸಿನೀರಿಗೆ ನಾಲ್ಕು ಎಲೆ ಕರಿಬೇವು ಹಾಕಿ ಕುಡಿದರೆ ಕಲ್ಮಶಗಳೆಲ್ಲ ದೂರವಾಗಿ ಹೊಟ್ಟೆ ಪರಿಶುದ್ಧವಾಗುತ್ತದೆ. ಕರಿಬೇವನ್ನು ಕಾದ ತೆಂಗಿನ ಎಣ್ಣೆಗೆ ಹಾಕಿ ಅರ್ಧ ಗಂಟೆ ಹೊತ್ತು ಮುಚ್ಚಿಡಿ. ಸೋಸಿದ ಬಳಿಕ ಬಾಟಲ್ ಗೆ ಹಾಕಿ ಮುಚ್ಚಿಡಿ. 6 ತಿಂಗಳವರೆಗೆ ಕೆಡದೆ ಉಳಿಯುವ ಈ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಹಾಗೂ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ.
ಕರಿಬೇವನ್ನು ಕುದಿಸಿದ ನೀರಿನಿಂದ ತೊಳೆದರೆ ತಲೆ ಹೊಟ್ಟು, ತುರಿಕೆ, ಹೇನಿನ ಸಮಸ್ಯೆ ದೂರವಾಗುತ್ತದೆ.
ಬೇವಿನ ಎಣ್ಣೆ ಹಾಗು ತುಳಸಿ ಎಲೆ ಹಾಕಿದ ನೀರಿನ ಸ್ನಾನದಿಂದ ಕಜ್ಜಿ ಮತ್ತು ಹುಣ್ಣಿನ ಸಮಸ್ಯೆಯಿಂದ ದೂರವಿರಬಹುದು. ಇದರ ಕಷಾಯ ಸೇವನೆಯಿಂದ ಚರ್ಮದ ತುರಿಕೆಯೂ ಕಡಿಮೆಯಾಗುತ್ತದೆ.
ಬಿಸಿ ನೀರಿಗೆ ಹತ್ತು ಎಲೆ ಕರಿಬೇವು, ಚಿಟಿಕೆ ಉಪ್ಪು, ಒಂದು ಚಮಚ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಆಹಾರದ ರೂಪದಲ್ಲಿ ಇದರಿಂದ ತಯಾರಿಸಿದ ಚಟ್ನಿ, ಚಟ್ನಿಪುಡಿಯನ್ನೂ ಸೇವಿಸಿ ಆರೋಗ್ಯ ಸಮಸ್ಯೆಗಳಿಂದ ದೂರವಿರಿ.