ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ರಾಜ್ಯದ ಎಲ್ಲೆಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಪ್ರತಿಯೊಂದು ವಾಹನ ಹಾಗೂ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.
ಹೀಗೆ ಮಾಡುವಾಗ ಈಗಾಗಲೇ ಕೋಟ್ಯಾಂತರ ರೂಪಾಯಿ ನಗದು, ಅಷ್ಟೇ ಮೊತ್ತದ ಸಾಮಗ್ರಿಗಳು ಸಿಕ್ಕಿದ್ದು, ಆದರೂ ಕೂಡ ಎಗ್ಗಿಲ್ಲದೆ ಹಣ ಸಾಗಾಟ ನಡೆದಿದೆ. ಇದಕ್ಕಾಗಿ ನಾನಾ ತಂತ್ರಗಳನ್ನು ಹೆಣೆಯಲಾಗುತ್ತಿದ್ದು, ದಾವಣಗೆರೆ ಜಿಲ್ಲೆ ನ್ಯಾಮತಿ ಬಳಿ ನಡೆದಿರುವ ಘಟನೆಯೊಂದು ಬೆರಗಾಗಿಸುವಂತಿದೆ.
ಜೀನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಇರುವ ಚೆಕ್ ಪೋಸ್ಟ್ ಸಮೀಪ ಬುಧವಾರ ತಡರಾತ್ರಿ 12:30 ರ ಸುಮಾರಿಗೆ ಇಬ್ಬರು ಯುವಕರಿದ್ದ ಬೈಕ್ ಬಂದಿದೆ. ಶಿಕಾರಿಪುರ ಮೂಲದ ಕುಮಾರ್ ಮತ್ತು ಸೈಫುಲ್ಲಾ ಇದರಲ್ಲಿದ್ದು, ಇವರುಗಳ ವರ್ತನೆ ಪೊಲೀಸರಿಗೆ ಅನುಮಾನ ತರಿಸಿದೆ.
ಹೀಗಾಗಿ ಸೈಫುಲ್ಲಾ ನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಸೊಂಟಕ್ಕೆ 500 ರೂಪಾಯಿ ಮುಖಬೆಲೆಯ ನೋಟಿನ ಕಟ್ಟುಗಳನ್ನು ಕಟ್ಟಿಕೊಂಡಿದ್ದು ಕಂಡುಬಂದಿದೆ. ಇದರ ಮೌಲ್ಯ 7,46,200 ರೂಪಾಯಿಗಳಾಗಿದ್ದು ಯಾವುದೇ ಸೂಕ್ತ ದಾಖಲೆ ನೀಡಲು ವಿಫಲರಾದ ಕಾರಣ ಹಣವನ್ನು ವಶಕ್ಕೆ ಪಡೆಯಲಾಗಿದೆ.