ಭುವನೇಶ್ವರದ ಮಾಜಿ ಸೈನಿಕರೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಕಷ್ಟಪಟ್ಟು ಸಂಪಾದಿಸಿದ 95 ಲಕ್ಷ ರೂ.ಗಳನ್ನ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದ ಸುಭಾಷ್ ನಂದಾ, ನಿವೃತ್ತ ರಕ್ಷಣಾಧಿಕಾರಿ.
ಸುಭಾಷ್ ರವರು 2011 ರಿಂದ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಪಾಲಿಸಿಯನ್ನು ಹೊಂದಿದ್ದರು, ಈ ಇನ್ಶುರೆನ್ಸ್ 6 ಲಕ್ಷ ರೂ. ಮೌಲ್ಯದೊಂದಿಗೆ 2015 ರಲ್ಲಿ ಮೆಚ್ಯೂರ್ ಆಗಿದೆ. ಇನ್ಶುರೆನ್ಸ್ ಮೆಚ್ಯೂರಿಟಿಯಾಗುವ ಮೊದಲು, ವಂಚನೆಗೊಳಗಾದ ನಂದಾ ಅವರಿಗೆ ಭಾರತೀಯ ರಾಷ್ಟ್ರೀಯ ಪಾವತಿ ಕಾರ್ಪೊರೇಶನ್ ನ ಆದಾಯ ತೆರಿಗೆ ಇಲಾಖೆಯ ಉದ್ಯೋಗಿಗಳ ಹೆಸರಲ್ಲಿ ಕರೆ ಬಂದಿದೆ.
ನಿಮ್ಮ ಇನ್ಶುರೆನ್ಸ್ ಗೆ ಬೋನಸ್ ನೀಡುತ್ತೇವೆ ಎಂದು ವಂಚಕರು ನಂದಾ ಅವ್ರನ್ನ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ. ಇವರ ಮಾತುಗಳನ್ನ ನಂಬಿದ ನಂದಾ, ವಿವಿಧ ದಿನಾಂಕಗಳಲ್ಲಿ ವಿವಿಧ ಖಾತೆಗಳಿಗೆ ಒಟ್ಟು 95ಲಕ್ಷ ರೂ.ಗಳನ್ನ ವರ್ಗಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವರ್ಗಾಯಿಸಿದ ಮೇಲೂ ಬೋನಸ್ ಸಿಗದಿದ್ದ ಮೇಲೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಅರಿತ ಸುಭಾಷ್ ನಂದಾ, ಕ್ರೈಂ ಬ್ರಾಂಚ್ ನ ಪ್ರಧಾನ ಕಚೇರಿಯಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಐಪಿಸಿ ಸೆಕ್ಷನ್ 419/420/465/468/471/120-ಬಿ/34 ಮತ್ತು 66 ಸಿ ಮತ್ತು 66-ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೈಬರ್ ಕ್ರಿಮಿನಲ್ಗಳನ್ನು ಶೀಘ್ರದಲ್ಲೆ ಕಂಡುಹಿಡಿದು ಬಂಧಿಸುತ್ತೇವೆ, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.