ಕೋಪಗೊಂಡ ಗೂಳಿಯೊಂದು ಸೈಕಲ್ ಸವಾರರ ಮೇಲೆ ದಾಳಿ ಮಾಡಿದ ಭಯಾನಕ ಘಟನೆ ಯುಎಸ್ ನ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಫ್-ರೋಡ್ ರೇಸ್‌ನಲ್ಲಿ ಭಾಗವಹಿಸಿದ ಸೈಕಲ್ ಸವಾರರ ಮೇಲೆ ಗೂಳಿ ದಾಳಿಯೆಸಗಿದೆ.
ಆನ್‌ಲೈನ್‌ನಲ್ಲಿ ಈ ದೃಶ್ಯದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೈಕಲ್ ಸವಾರರು ರೇಸ್‍ನಲ್ಲಿ ಪಾಲ್ಗೊಳ್ಳುವ ಮಾರ್ಗದಲ್ಲಿ ಅಲೆದಾಡುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಗೂಳಿಯು ಮೂವರು ಬೈಸಿಕಲ್ ಸವಾರರನ್ನು ಹೊಡೆದು ಒಬ್ಬನನ್ನು ತನ್ನ ಕೊಂಬಿನಲ್ಲಿ ತಿವಿದು ಎಸೆದಿದೆ. ಫೆಬ್ರವರಿ 12 ರಂದು ಬೇಕರ್ಸ್‌ಫೀಲ್ಡ್ ಪ್ರದೇಶದಲ್ಲಿ 80 ಮೈಲಿ ಸೈಕಲ್ ಕೋರ್ಸ್ ಬಿಯಾಂಚಿ ರಾಕ್ ಕಾಬ್ಲರ್ ಸಮಯದಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ.
ಓಟದ ಸ್ಪರ್ಧಿ ರಿಚರ್ಡ್ ಪೆಪ್ಪರ್ ಪ್ರಕಾರ, ಬುಲ್‌ಗಳ ನೆಲೆಯಾಗಿರುವ ಖಾಸಗಿ ರಾಂಚ್‌ನೊಳಗಿನ ಪ್ರದೇಶಕ್ಕೆ ಸವಾರರು ಪ್ರವೇಶಿಸಿದ್ದರು. ಬೇಕರ್ಸ್‌ಫೀಲ್ಡ್ ಬಳಿಯ ಖಾಸಗಿ ರಾಂಚ್ ರೇಸ್‌ಕೋರ್ಸ್‌ನ ಭಾಗವಾಗಿತ್ತು. ಅಲ್ಲಿಯೇ ಓಡಾಡುತ್ತಿದ್ದ ಗೂಳಿಯೊಂದು ಕೋಪದಿಂದ ದಾಳಿ ನಡೆಸಿದೆ. ಕೆಲವರು ಗೂಳಿಯಿಂದ ತಪ್ಪಿಸಿಕೊಂಡರೂ ಕೂಡ, ದುರಾದೃಷ್ಟವಶಾತ್ ಸ್ಪರ್ಧಿಯೊಬ್ಬ ಗೂಳಿಯ ಹೊಡೆತಕ್ಕೆ ನಲುಗಿದ್ದಾನೆ.
ಸ್ಪರ್ಧಿಯನ್ನು ಟೋನಿ ಇಂಡರ್ಬಿಟ್ಜಿನ್ ಎಂದು ಗುರುತಿಸಲಾಗಿದೆ. ಈತ ಗೂಳಿಯನ್ನು ಹಸು ಎಂದು ತಪ್ಪಾಗಿ ಭಾವಿಸಿದ್ದಾನೆ. ಹೀಗಾಗಿ ಅದೇನು ಮಾಡುವುದಿಲ್ಲ ಎಂದು ತಿಳಿದ ಆತ ನೇರವಾಗಿ ಸೈಕ್ಲಿಂಗ್ ಮಾಡಿದ್ದಾನೆ. ಮೊದಲೇ ರೊಚ್ಚಿಗೆದ್ದಿದ್ದ ಗೂಳಿ, ಈತನ ಮೇಲೆ ಸವಾರಿ ಮಾಡಿದೆ. ಅದೃಷ್ಟವಶಾತ್ ಟೋನಿಯು ಗಂಭೀರ ಗಾಯಗಳಿಂದ ಪಾರಾಗಿದ್ದಾನೆ.