ಸೇವಾ ಶುಲ್ಕ ಪಾವತಿಸುವಂತೆ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಈ ಬಗ್ಗೆ ಗ್ರಾಹಕ ವ್ಯವಹಾರಗಳ ಇಲಾಖೆ ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆ ನೀಡಿದೆ. ಈ ಶುಲ್ಕಗಳ ಸಂಗ್ರಹ ಕಾನೂನಿನ ಪ್ರಕಾರ ಕಡ್ಡಾಯವಲ್ಲ. ಗ್ರಾಹಕರು ತಮ್ಮ ವಿವೇಚನೆಯಿಂದ ಸ್ವಯಂಪ್ರೇರಿತವಾಗಿ ಕೊಟ್ಟರೆ ರೆಸ್ಟೋರೆಂಟ್‌ಗಳು ಸ್ವೀಕರಿಸಬಹುದು.
ಸೇವಾ ಶುಲ್ಕ ಪಾವತಿಸುವಂತೆ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಒತ್ತಾಯಿಸುತ್ತಿರುವ ಬಗ್ಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ಗಮನಿಸಿದ ಗ್ರಾಹಕ ವ್ಯವಹಾರಗಳ ಇಲಾಖೆ, ನ್ಯಾಶನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI)ಗೆ ಸೂಚನೆ ರವಾನಿಸಿದೆ. ಕೆಲವು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕದ ಹೆಸರಲ್ಲಿ ಭಾರೀ ಮೊತ್ತ ವಿಧಿಸಲಾಗ್ತಿದೆ. ಜೊತೆಗೆ ಸೇವಾ ಶುಲ್ಕ ಕೊಡುವಂತೆ ಗ್ರಾಹಕರನ್ನು ಒತ್ತಾಯಿಸಲಾಗ್ತಿದೆ.
ಬಿಲ್ ಮೊತ್ತದಿಂದ ಸರ್ವಿಸ್ ಚಾರ್ಜ್ ತೆಗೆದು ಹಾಕುವಂತೆ ಕೇಳಿದಾಗ ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಕಿರುಕುಳ ನೀಡಿದ ಪ್ರಕರಣಗಳೂ ನಡೆದಿವೆ. ಇದನ್ನೆಲ್ಲ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸಮಸ್ಯೆ ಪ್ರತಿನಿತ್ಯ ಗ್ರಾಹಕರ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಗ್ರಾಹಕರ ಹಕ್ಕುಗಳ ಮೇಲೂ ಹೆಚ್ಚಿನ ಪರಿಣಾಮ ಬೀರುವುದರಿಂದ ಸಮಸ್ಯೆಯನ್ನು ಸೂಕ್ಷ್ಮ ಮತ್ತು ವಿವರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಇಲಾಖೆ ಭಾವಿಸುತ್ತದೆ ಎಂದು ರೋಹಿತ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆ 2022ರ ಜೂನ್2ಕ್ಕೆ NRAI ಜೊತೆಗೆ ರೆಸ್ಟೋರೆಂಟ್‌ಗಳು ವಿಧಿಸುವ ಸೇವಾ ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಸಭೆಯನ್ನು ನಿಗದಿಪಡಿಸಿದೆ. 2017ರ ಎಪ್ರಿಲ್ 21ರಂದು ಗ್ರಾಹಕ ವ್ಯವಹಾರಗಳ ಇಲಾಖೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸೇವಾ ಶುಲ್ಕಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ರೆಸ್ಟೊರೆಂಟ್‌ಗೆ ಗ್ರಾಹಕ ಪ್ರವೇಶಿಸಿದ ಎಂದಾಕ್ಷಣ ಅದನ್ನು ಸೇವಾ ಶುಲ್ಕ ಪಾವತಿಸಲು ಒಪ್ಪಿಗೆ ಎಂದು ಸ್ವತಃ ಅರ್ಥೈಸಿಕೊಳ್ಳಲಾಗುವುದಿಲ್ಲ ಎಂಬುದನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಗ್ರಾಹಕರಿಗೆ ಸೇವಾ ಶುಲ್ಕ ಪಾವತಿಸುವಂತೆ ಒತ್ತಾಯಿಸಿದರೆ ಗ್ರಾಹಕ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ದೂರು ನೀಡಬಹುದು. ಅನ್ವಯವಾಗುವ ತೆರಿಗೆಗಳೊಂದಿಗೆ ಮೆನು ಕಾರ್ಡ್‌ನಲ್ಲಿ ಪ್ರದರ್ಶಿಸಲಾದ ಬೆಲೆಗಳನ್ನು ಮಾತ್ರ ಗ್ರಾಹಕರು ಪಾವತಿಸಬೇಕು. ಅದಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುವಂತಿಲ್ಲ ಎಂಬುದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿದೆ.