ಬೆಂಗಳೂರು : ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಬಾರಿ ತೀವ್ರ ತರವಾದ ಬಂದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ, ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ ಸೇರಿದಂತೆ ಎಲ್ಲಾ ರೈತ ಸಂಘಟನೆಗಳು ಬೆಂಬಲ ನೀಡಿವೆ. ಬೇರೆ ಸಂಘಟನೆಗಳು ಕೂಡ ಬೆಂಬಲ ಘೋಷಣೆ ಬಿಟ್ಟು ನೈತಿಕವಾಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ರೈತರೇ ಈ ಹೋರಾಟದ ಮುಂಚೂಣಿ ವಹಿಸಲಿದ್ದಾರೆ. ಈ ಬಾರಿ ತೀವ್ರ ತರ ಬಂದ್ ಗೆ ನಿರ್ಧರಿಸಲಾಗಿದೆ. ಭಾರತ್ ಬಂದ್ ಗೆ ಅಪಸ್ವರ ಎತ್ತುವವರು ಕೇವಲ ಸರ್ಕಾರದ ಪರ ಇರುವವರು ಅಷ್ಟೇ. ನಾವು ರಾಜಕೀಯ ಪಕ್ಷಗಳ ಬೆಂಬಲ ಕೇಳುತ್ತಿಲ್ಲ. ಇದು ರೈತ, ಅನ್ನದಾತನ ಹೋರಾಟವಾಗಿದೆ ಎಂದರು.
ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಬಂದರು, ರೈಲ್ವೆ, ಹೆದ್ದಾರಿ ಎಲ್ಲವನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿದೆ. ಹೀಗೆಯೆ ಮುಂದುವರೆದರೆ ರೈತರನ್ನೂ ಖಾಸಗೀಕರಣ ಮಾಡುತ್ತಾರೆ. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಈ ಹೋರಾಟ ನಡೆಯಲಿದೆ. ಬಂದ್ ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.