ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ ನಡೆಯುತ್ತಿರುವ ಸಾವಿನಲ್ಲಿ ಶೇಕಡಾ 60ರಷ್ಟು ಪಾಲು ಭಾರತದ್ದಿದೆ. ಕಳೆದ ಎರಡು ವರ್ಷಗಳ ಅಂಕಿ-ಅಂಶ ಇದನ್ನು ಸ್ಪಷ್ಟಪಡಿಸಿದೆ.
ಈ ಹಿಂದೆ ನಡೆದ ಸಂಶೋಧನೆಯೊಂದು ಸೆಲ್ಫಿಯನ್ನು ಮಾನಸಿಕ ಸಮಸ್ಯೆ ಎಂದು ಘೋಷಣೆ ಮಾಡಿದೆ.
ಅಗತ್ಯಕ್ಕಿಂತ ಹೆಚ್ಚು ಸೆಲ್ಫಿ ತೆಗೆಯುವುದು ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಒಂದು ರೋಗ. ಇದನ್ನು ಸೆಲ್ಫಿಟಿಸ್ ಎಂದು ಕರೆಯಲಾಗುತ್ತದೆ. ಸೆಲ್ಫಿಟಿಸ್ ಅನೇಕ ವರ್ಷಗಳಿಂದ ಕೇಳಿ ಬರ್ತಿರುವ ಶಬ್ಧ. ಆದ್ರೆ ಇದಕ್ಕೆ ತಜ್ಞರು ಈಗ ಮಾನಸಿಕ ರೋಗದ ರೂಪ ನೀಡಿದ್ದಾರೆ.
ಸಂಶೋಧನೆ ಇದನ್ನು ಸೆಲ್ಫಿಟಿಸ್ ಬಿಹೇವಿಯರ್ ಸ್ಕೇಲ್ ಎಂದು ಕರೆದಿದೆ. ಇದ್ರಲ್ಲಿ ಮೂರು ಹಂತವಿರುತ್ತದೆ. ಆರಂಭದಲ್ಲಿ ಈ ರೋಗಿಗಳು ದಿನದಲ್ಲಿ ಮೂರು ಬಾರಿ ಮಾತ್ರ ಫೋಟೋ ತೆಗೆಯುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣಕ್ಕೆ ಹಾಕುವುದಿಲ್ಲ. ಎರಡನೇ ಹಂತದಲ್ಲಿ ಸೆಲ್ಫಿ ತೆಗೆಯುವ ಪ್ರಮಾಣ ಹೆಚ್ಚಾಗುವ ಜೊತೆಗೆ ಸಾಮಾಜಿಕ ಜಾಲತಾಣಕ್ಕೆ ಫೋಟೋ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ. ದಿನದಲ್ಲಿ ಹೆಚ್ಚೆಚ್ಚು ಫೋಟೋ ಹಾಕಲು ಮನಸ್ಸು ಹಾತೊರೆಯುತ್ತದೆ. ಈ ಕ್ರಿಯೆ ಮಿತಿ ಮೀರಿದಲ್ಲಿ ಅದನ್ನು ಕೊನೆಯ ಹಂತವೆಂದು ಪರಿಗಣಿಸಲಾಗುತ್ತದೆ.
ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿರುವ ಪ್ರಕರಣವನ್ನು ಅನೇಕ ದೇಶಗಳು ಗಂಭೀರವಾಗಿ ತೆಗೆದುಕೊಂಡಿವೆ. ಈ ಬಗ್ಗೆ ಅನೇಕ ಜಾಗೃತಿಗಳು ನಡೆಯುತ್ತಿವೆ. ಆದ್ರೆ ಅಷ್ಟೊಂದು ಸೆಲ್ಫಿ ಹುಚ್ಚಿಗೆ ಸರಿಯಾದ ಕಾರಣ ಪತ್ತೆಯಾಗಿಲ್ಲ. ಆತ್ಮವಿಶ್ವಾಸದ ಕೊರತೆ, ಗಮನ ಸೆಳೆಯಲು, ಬೇರೆಯವರಿಗಿಂತ ಮುಂದಿರಲು ಬಯಸುವವರು ಈ ಹುಚ್ಚು ಹಚ್ಚಿಕೊಳ್ತಾರೆ ಎಂದು ನಂಬಲಾಗಿದೆ. ದೃಢ ನಿರ್ಧಾರ ಮಾಡಿದಲ್ಲಿ ಈ ರೋಗದಿಂದ ಸುಲಭವಾಗಿ ಹೊರಗೆ ಬರಬಹುದಾಗಿದೆ