
ಲೈಂಗಿಕ ಸಮಸ್ಯೆ ಬಗ್ಗೆ ಪುರುಷರು ಹೇಳಿಕೊಳ್ಳುವುದು ಕಡಿಮೆ. ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಕೆಲವರು ಮುಜುಗರಪಟ್ಟುಕೊಂಡ್ರೆ ಮತ್ತೆ ಕೆಲವರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಪ್ರತಿಯೊಬ್ಬರೂ ಲೈಂಗಿಕ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕು. ಲೈಂಗಿಕ ಸಮಸ್ಯೆ ಮಾನಸಿಕ ಹಾಗೂ ದೈಹಿಕ ಆರೋಗ್ಯದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತದೆ. ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ನಾಲ್ಕು ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ತಕ್ಷಣ ಅವರು ಆಂಡ್ರಾಲಾಜಿಸ್ಟ್ ಸಂಪರ್ಕಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.

ಅಕಾಲಿಕ ಸ್ಖಲನ : ಇದು ಪುರುಷರನ್ನು ಕಾಡುವ ಮುಖ್ಯ ಸಮಸ್ಯೆ. ಅನೇಕರು ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಅಕಾಲಿಕ ಸ್ಖಲನ ಸಮಸ್ಯೆ ಎದುರಿಸುತ್ತಾರೆ. ಕಡಿಮೆ ವಯಸ್ಸಿನ ಪುರುಷರನ್ನು ಇದು ಹೆಚ್ಚಾಗಿ ಕಾಡುತ್ತದೆ. ಅಕಾಲಿಕ ಸ್ಖಲನವು ವಯಸ್ಸಾದವರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಎಚ್ಚರಿಕೆಯ ಸಂಕೇತವಾಗಿದೆ. ಇದು ಮುಂದಿನ ಕಾಯಿಲೆಯ ಸಂಕೇತವೂ ಆಗಿರುತ್ತದೆ.

ಲೈಂಗಿಕ ಬಯಕೆಯಲ್ಲಿ ಇಳಿಕೆ : ಲೈಂಗಿಕ ಬಯಕೆಯ ಇಳಿಕೆ ಎಂದರೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಈ ಸಮಸ್ಯೆ ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಮಟ್ಟಕ್ಕೆ ಸಂಬಂಧಿಸಿದೆ. ಟೆಸ್ಟೋಸ್ಟೆರಾನ್,ಸೆಕ್ಸ್ ಡ್ರೈವ್, ವೀರ್ಯ ಉತ್ಪಾದನೆ, ಸ್ನಾಯುಗಳು, ಕೂದಲು ಮತ್ತು ಮೂಳೆಗಳಿಗೆ ಸಂಬಂಧಿಸಿದೆ. ಕಡಿಮೆ ಟೆಸ್ಟೋಸ್ಟೆರಾನ್ ದೇಹ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಖಿನ್ನತೆ, ಆತಂಕ ಅಥವಾ ಅದಕ್ಕೆ ಸಂಬಂಧದ ತೊಂದರೆಗಳಿಗೆ ಕಾರಣವಾಗುತ್ತದೆ.ಇದ್ರಿಂದ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ.

ಬಂಜೆತನ : ಮಹಿಳೆಯರ ಬಂಜೆತನಕ್ಕೆ ಪುರುಷರ ಕೊಡುಗೆ ಶೇಕಡಾ 40-50ರಷ್ಟಿರುತ್ತದೆ. ಗರ್ಭ ಧರಿಸದಿರಲು ಅನೇಕ ಕಾರಣಗಳಿವೆ. ಅಸಮತೋಲಿತ ಹಾರ್ಮೋನು,ಲೈಂಗಿಕ ಅಪಸಾಮಾನ್ಯ ಕ್ರಿಯೆ ಸೇರಿದಂತೆ ಹಲವು ಕಾರಣಗಳು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆ.

ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ : ದೈಹಿಕ ಸಂಬಂಧ ಬೆಳೆಸುವ ವೇಳೆ ನಿಮಿರುವಿಕೆ ಸಮಸ್ಯೆ ಕಾಡಿದ್ರೆ ಅದನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಎನ್ನುತ್ತಾರೆ. ವ್ಯಕ್ತಿಯ ಜನನಾಂಗಗಳಿಗೆ ರಕ್ತ ಹರಿವು ಸರಿಯಾಗಿ ಆಗದೆ ಹೋದಲ್ಲಿ ಈ ಸಮಸ್ಯೆ ಕಾಡುತ್ತದೆ. ಥೈರಾಯ್ಡ್, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಕಾರಣಗಳಿಂದ ಈ ಸಮಸ್ಯೆ ಕಾಡುತ್ತದೆ.